ಮಂಗಳೂರು: ಸಣ್ಣ ಮನಸ್ತಾಪದಿಂದ ಮನೆ ತೊರೆದ ಕೇರಳದ ವೃದ್ಧರೋರ್ವರು ಮಂಗಳೂರಿಗೆ ಬಂದು ಅಪಘಾತವೊಂದರಲ್ಲಿ ಕಾಲು ಕಳೆದುಕೊಂಡು ಬೀದಿಪಾಲಾಗಿದ್ದರು. ಅವರ ಸ್ಥಿತಿ ಗಮಿನಿಸಿದ 'ಟೀಮ್ ಬಿ ಹ್ಯೂಮನ್' ಸಂಸ್ಥೆ ಕೊನೆಗೂ ಆ ವೃದ್ಧನನ್ನು ಕುಟುಂಬದೊಂದಿಗೆ ಸೇರಿಸಿ ಮಾನವೀಯತೆ ಮೆರೆದಿದೆ.
ಪಯ್ಯನ್ನೂರು ಕಾವಂಚಲ್ ಎಂಬ ಊರಿನ ಬಾಲನ್(69) ದಿನಗೂಲಿ ನೌಕರನಾಗಿ ದುಡಿಯುತ್ತಿದ್ದರು. ತಮ್ಮ ಪತ್ನಿ ಪಾರ್ವತಿ ಮತ್ತು ಪುತ್ರಿ ಶೀಬಾರೊಂದಿಗೆ ನೆಲೆಸಿದ್ದ ಬಾಲನ್ ಕುಟುಂಬದೊಂದಿಗೆ ಮನಸ್ತಾಪ ಮಾಡಿಕೊಂಡು ಮನೆ ತೊರೆದು ಬಂದಿದ್ದರು.

ಆದರೆ ಲಾಕ್ಡೌನ್ ವೇಳೆ ಮಂಗಳೂರಿನಲ್ಲಿಯೇ ಸಿಲುಕಿದ್ದರು. ಮನೆಗೆ ತೆರಳಲಾಗದೆ ಸಂಕಷ್ಟ ಎದುರಿಸಿದರು. ಇದೇ ವೇಳೆ ರಸ್ತೆ ಅಪಘಾತ ಸಹ ಉಂಟಾಗಿ ಒಂದು ಕಾಲು ಕಳೆದುಕೊಡು ಇನ್ನಷ್ಟು ಸಂಕಷ್ಟಕ್ಕೆ ಬಿದ್ದರು. ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಹಂಪನಕಟ್ಟೆಯ ಫುಟ್ಪಾತ್ನಲ್ಲಿಯೇ ಜೀವನ ನಡೆಸಬೇಕಾದ ಪರಿಸ್ಥಿತಿ ಬಂದೊದಗಿತ್ತು.
ಅವರ ದಾರುಣ ಸ್ಥಿತಿಯನ್ನು ಕಂಡ ಸ್ಥಳೀಯರು ‘ಟೀಮ್ ಬಿ ಹ್ಯೂಮನ್' ಸಂಸ್ಥೆಗೆ ಮಾಹಿತಿ ಮುಟ್ಟಿಸುತ್ತಾರೆ. ತಕ್ಷಣ ಸ್ಪಂದಿಸಿದ 'ಟೀಮ್ ಬಿ ಹ್ಯೂಮನ್' ಅವರನ್ನು ಆಶ್ರಯ ಕೇಂದ್ರಕ್ಕೆ ಕೊಂಡೊಯ್ದು ಎಲ್ಲಾ ಅಗತ್ಯ ಆರೈಕೆಗಳನ್ನು ಮಾಡಲಾಗುತ್ತದೆ.

ಈ ಸಂದರ್ಭದಲ್ಲಿ ಬಾಲನ್ ಕುಟುಂಬವನ್ನು ಸಂಪರ್ಕಿಸಿ ಮಾಹಿತಿ ನೀಡುತ್ತಾರೆ. ಮೊದಲಿಗೆ ಕುಟುಂಬದವರು ಬಾಲನ್ ಅವರನ್ನು ಮತ್ತೆ ತಮ್ಮ ಮನೆಗೆ ಸೇರಿಸಿಕೊಳ್ಳಲು ನಿರಾಕರಿಸುತ್ತಾರೆ. ಪಟ್ಟು ಬಿಡದ 'ಟೀಮ್ ಬಿ ಹ್ಯೂಮನ್' ಸಂಸ್ಥೆಯು ಪಯ್ಯನ್ನೂರು ಕಾವಂಚಲ್ ಸಮೀಪದ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಹಾಗೂ ನೆರೆಹೊರೆಯವರನ್ನು ಸಂಪರ್ಕಿಸಿ ಬಾಲನ್ ಮನೆಯವರಿಗೆ ಮನವರಿಕೆ ಮಾಡಿಸಿದ್ದು, ಇದೀಗ ಕುಟುಂಬದೊಂದಿಗೆ ಸೇರಿದ್ದಾರೆ.
ಇದನ್ನೂ ಓದಿ: ಸುರತ್ಕಲ್ ಟೋಲ್ ಕೇಂದ್ರ ತಕ್ಷಣ ತೆರವುಗೊಳಿಸಿ; ಹೋರಾಟ ಸಮಿತಿ ಒತ್ತಾಯ