ಮಂಗಳೂರು: ವಿದ್ಯಾಗಮ ಯೋಜನೆಯಡಿ ಮನೆಮನೆಗೆ ತೆರಳಿ ಮಕ್ಕಳಿಗೆ ಪಾಠ ಮಾಡಲು ಹೋಗಿ ಕೊರೊನಾ ಸೋಂಕಿತೆಯಾಗಿ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಮೂಡುಬಿದಿರೆ ತಾಲೂಕಿನ ಅನುದಾನಿತ ಶಾಲಾ ಶಿಕ್ಷಕಿ ಪದ್ಮಾಕ್ಷಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ವಿದ್ಯಾಗಮ ಯೋಜನೆಯಡಿ ಇವರು ವಿದ್ಯಾರ್ಥಿಗಳ ಮನೆ ಮನೆಗೆ ತೆರಳಿ ಪಾಠ ಹೇಳಿಕೊಡುತ್ತಿದ್ದು, ಈ ವೇಳೆ ಕೊರೊನಾ ತಗುಲಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆ ದಾಖಲಿಸಲಾಗಿತ್ತು. ಅವರ ಪತಿ ಶಶಿಕಾಂತ್ ವೈ ಮತ್ತು ಪುತ್ರನಿಗೂ ಕೊರೊನಾ ಸೋಂಕಿದ್ದರೂ, ಅವರು ಹೋಮ್ ಐಸೋಲೇಷನ್ನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.
ಶಿಕ್ಷಕಿ ಪದ್ಮಾಕ್ಷಿಯವರಿಗೆ ನೆಗೆಟಿವ್ ಬಂದಿದ್ದರೂ ಶ್ವಾಸಕೋಶದ ತೊಂದರೆಯಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದರು. ತಮ್ಮ ಕುಟುಂಬ ಎದುರಿಸುತ್ತಿರುವ ಸಂಕಷ್ಟದ ಕುರಿತು ದಂಪತಿಯ ಪುತ್ರಿ ಐಶ್ವರ್ಯ ಜೈನ್ ಸಾಮಾಜಿಕ ಜಾಲತಾಣದಲ್ಲಿ ನೋವು ತೋಡಿಕೊಂಡಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸುದ್ದಿ ಮಾಧ್ಯಮಗಳಲ್ಲೂ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಇದಕ್ಕೆ ತಕ್ಷಣ ಸ್ಪಂದಿಸಿದ ಸಿಎಂ ಯಡಿಯೂರಪ್ಪನವರು ಚಿಕಿತ್ಸೆಯ ಎಲ್ಲ ವೆಚ್ಚವನ್ನು ಭರಿಸುವುದಾಗಿ ಸೂಚನೆ ನೀಡಿದ್ದರು.
ಈ ಮಧ್ಯೆ ಗುರುವಾರ ಶಿಕ್ಷಕಿಯ ಆರೋಗ್ಯ ಮತ್ತಷ್ಟು ಬಿಗಡಾಯಿಸಿದ್ದು, ಶುಕ್ರವಾರ ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರದ ವತಿಯಿಂದಲೇ ಏರ್‍ಲಿಫ್ಟ್ ಮಾಡಿ ಬೆಂಗಳೂರಿಗೆ ಕರೆದೊಯ್ದು ಉನ್ನತ ಚಿಕಿತ್ಸೆ ನೀಡಲು ಚಿಂತನೆ ನಡೆಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಶಿಕ್ಷಕಿ ಪದ್ಮಾಕ್ಷಿ ಶುಕ್ರವಾರ ಬೆಳಗ್ಗೆ ನಿಧನರಾಗಿದ್ದಾರೆ.