ಬೆಳ್ತಂಗಡಿ (ದಕ್ಷಿಣ ಕನ್ನಡ): ಆಟವಾಡುತ್ತಿದ್ದ ಬಾಲಕನೋರ್ವ ಜಾರಿ ಬಿದ್ದು ತಲೆಯ ಹಿಂಬದಿಗೆ ಗಾಯವಾಗಿ ರಕ್ತಸ್ರಾವವಾದರೂ ಶಿಕ್ಷಕರು ಆಸ್ಪತ್ರೆಗೆ ಕರೆದೊಯ್ಯದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಲಾದ ಘಟನೆ ಬೆಳಕಿಗೆ ಬಂದಿದೆ.
ತಾಲೂಕಿನ ತೋಟತ್ತಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 4ನೇ ತರಗತಿ ವಿದ್ಯಾರ್ಥಿಯ ತಲೆಗೆ ಪೆಟ್ಟು ಬಿದ್ದಿತ್ತು. ಕೂಡಲೇ ಶಿಕ್ಷಕರು ಪ್ರಥಮ ಚಿಕಿತ್ಸೆ ನೀಡಿ ಸ್ಥಳೀಯ ಆಸ್ಪತ್ರೆಗೆ ಸಾಗಿಸಬೇಕಿತ್ತು. ಆದರೆ ಇದಕ್ಕೆ ಬದಲಾಗಿ, ಮಕ್ಕಳಿಂದಲೇ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಈ ವಿಚಾರ ತಿಳಿದು ಸಾರ್ವಜನಿಕರು ಮಗುವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.
ಗಾಯಾಳುವಿಗೆ ಶಿಕ್ಷಕರು ಪ್ರಥಮ ಚಿಕಿತ್ಸೆ ನೀಡಲು ಮುಂದಾಗದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮಕ್ಕಳೇ ಪ್ರಥಮ ಚಿಕಿತ್ಸೆ ನೀಡುತ್ತಿರುವ ದೃಶ್ಯವನ್ನು ಸಾರ್ವಜನಿಕರೊಬ್ಬರು ತಮ್ಮ ಮೊಬೈಲ್ನಲ್ಲಿ ಚಿತ್ರೀಕರಿಸಿದ್ದು, ವಿಡಿಯೋ ಲಭ್ಯವಾಗಿದೆ.
ಶಾಲಾಭಿವೃದ್ಧಿ ಸಮಿತಿ ಹಾಗೂ ಹಳೇ ವಿದ್ಯಾರ್ಥಿ ಸಂಘದ ವತಿಯಿಂದ ಶನಿವಾರ ಸಭೆ ನಡೆದಿದೆ. ಮುಂದೆ ಇಂತಹ ಘಟನೆ ಮರುಕಳಿಸದಂತೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ಶಿಕ್ಷಕರು ತಿಳಿಸಿದ್ದಾರೆ.
"ಮಗು ಆರೋಗ್ಯವಾಗಿದೆ. ಸೋಮವಾರ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು" ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ಎದೆನೋವಿನಿಂದ ಕುಸಿದು ಬಿದ್ದ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ನೀಡಿದ ಸಿಐಎಸ್‌ಎಫ್ ಸಿಬ್ಬಂದಿ -ವಿಡಿಯೋ