ಸುಳ್ಯ(ದಕ್ಷಿಣ ಕನ್ನಡ): ಕಡಬ ಮೆಸ್ಕಾಂ ವ್ಯಾಪ್ತಿಯಲ್ಲಿ 15 ದಿನಗಳಿಂದ ವಿದ್ಯುತ್ ಪರಿವರ್ತಕವೊಂದು ರಸ್ತೆ ಬದಿಯಲ್ಲಿ ಬಿದ್ದಿದ್ದು, ಇನ್ನೂ ಇದನ್ನು ತೆರವು ಮಾಡಲು ಮಾತ್ರ ಮೆಸ್ಕಾಂ ಮುಂದಾಗಿಲ್ಲ.
ಕಡಬ ತಾಲೂಕಿನ ಮರ್ದಾಳ ಸಮೀಪದ ಕೆರ್ಮಾಯಿ - ಗುರಿಯಡ್ಕ ರಸ್ತೆಯ ಪುಯಿಲ ಎಂಬಲ್ಲಿ ಸುಮಾರು 15 ದಿನಗಳ ಹಿಂದೆ ಬೀಸಿದ ಗಾಳಿಯ ರಭಸಕ್ಕೆ ಸಿಕ್ಕಿ ವಿದ್ಯುತ್ ಪರಿವರ್ತಕ(ಟಿ. ಸಿ) ವೊಂದು ನೆಲಕ್ಕುರುಳಿದೆ. ಘಟನೆಯಿಂದ ವಿದ್ಯುತ್ ಸಂಪರ್ಕ ಕಳೆದುಕೊಂಡಿದ್ದ ಈ ಭಾಗಕ್ಕೆ ಪರ್ಯಾಯ ಮಾರ್ಗದಲ್ಲಿ ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಬಿದ್ದಿರುವ ಟಿ. ಸಿ ಯನ್ನು ತೆರವುಗೊಳಿಸಲು ಮೆಸ್ಕಾಂ ಈ ತನಕ ಮುಂದಾಗಿಲ್ಲ.
ಮಾತ್ರವಲ್ಲದೇ ಈ ರಸ್ತೆಯಲ್ಲಿ ದಿನಂಪ್ರತಿ ಹಲವಾರು ವಾಹನಗಳು, ದನಕರುಗಳು ಸಂಚರಿಸುತ್ತಿದ್ದು, ಅನಾಹುತಗಳಿಗೆ ಕಾರಣವಾಗಲಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.