ಮಂಗಳೂರು (ದ.ಕ) : ಕೋವಿಡ್-19 ಸೋಂಕಿನಿಂದ ಸಂಕಷ್ಟಕ್ಕೊಳಗಾದ ಟ್ಯಾಕ್ಸಿ ಚಾಲಕರಿಗೆ ಸರ್ಕಾರ ಘೋಷಿಸಿರುವ 5 ಸಾವಿರ ರೂ. ಪರಿಹಾರ ಧನ ಇನ್ನೂ ಎಲ್ಲರಿಗೂ ತಲುಪಿಲ್ಲ. ಅಲ್ಲದೆ ಸರ್ಕಾರ ಟ್ಯಾಕ್ಸಿ ಚಾಲಕರಿಗೆ ಮಾತ್ರ ಘೋಷಣೆ ಮಾಡಿರುವ ಈ ಪರಿಹಾರ ಧನವನ್ನು ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ನೀಡದೆ ತಾರತಮ್ಯ ಮಾಡಲಾಗಿದೆ ಎಂದು ದ.ಕ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್ ಅಧ್ಯಕ್ಷ ದಿನೇಶ್ ಕುಂಪಲ ಎಂ. ಆರೋಪಿಸಿದರು.
ನಗರದ ಪ್ರೆಸ್ ಕ್ಲಬ್ನಲ್ಲಿ ಮಾತನಾಡಿದ ಅವರು, ಆದಷ್ಟು ಬೇಗ ಅದನ್ನು ಸರಿಪಡಿಸಿ ಎಲ್ಎಂವಿ ಬ್ಯಾಡ್ಜ್ ಹೊಂದಿರುವಂತಹ ಚಾಲಕರಿಗೂ ಸರ್ಕಾರ ಪರಿಹಾರ ಧನ ಘೋಷಣೆ ಮಾಡಲಿ ಎಂದರು.
ಕೋವಿಡ್-19 ಸೋಂಕು ನಿರ್ಮೂಲನೆ ಕಾರ್ಯದಲ್ಲಿ ಪೊಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆಯವರ ಸಂಚಾರಕ್ಕೆ ಸುಮಾರು 150ಕ್ಕೂ ಅಧಿಕ ಟ್ಯಾಕ್ಸಿಗಳನ್ನು ನೀಡಲಾಗಿತ್ತು. ಆದರೆ, ಇಂದಿಗೆ 57 ದಿನಗಳಾದರೂ ಅದರ ಗೌರವ ಧನ ಇನ್ನೂ ಯಾವುದೇ ಟ್ಯಾಕ್ಸಿ ಚಾಲಕರಿಗೆ ತಲುಪಿಲ್ಲ ಎಂದರು.
ಕೋವಿಡ್-19 ಸೋಂಕಿನಿಂದ ಯಾವುದೇ ಬಾಡಿಗೆ ಇಲ್ಲದೆ ಸಂಕಷ್ಟಕ್ಕೊಳಗಾಗಿರುವ ಟ್ಯಾಕ್ಸಿ ಚಾಲಕರಿಗೆ ಜಿಲ್ಲಾಧಿಕಾರಿ ಶೀಘ್ರದಲ್ಲಿ ಈ ಗೌರವ ಧನ ಬಿಡುಗಡೆ ಮಾಡಲಿ. ಅದೇ ರೀತಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೂಡಾ ನಮ್ಮ ಹಲವಾರು ಟ್ಯಾಕ್ಸಿಗಳನ್ನು ಜಿಲ್ಲಾಡಳಿತ ಬಳಿಸಿಕೊಂಡರೂ ಅದರ ಗೌರವ ಧನವೂ ಈವರೆಗೆ ನಮಗೆ ತಲುಪಿಸಿಲ್ಲ. ಅದನ್ನು ಕೂಡಾ ಶೀಘ್ರದಲ್ಲೇ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು.
ದಿನದಿಂದ ದಿನಕ್ಕೆ ಏರುತ್ತಿರುವ ತೈಲಬೆಲೆಯಿಂದ ಟ್ಯಾಕ್ಸಿ ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ನಮಗೂ ಕಿ.ಮೀ ಇಂತಿಷ್ಟು ಎಂಬ ದರ ನಿಗದಿಪಡಿಸಬೇಕು. ಅಲ್ಲದೆ ಕೋವಿಡ್ ಸೋಂಕಿನಿಂದ ಕಳೆದ ಮೂರು ತಿಂಗಳಿನಿಂದ ಯಾವುದೇ ಬಾಡಿಗೆ ಇಲ್ಲದೆ ತೀವ್ರ ಸಂಕಷ್ಟಕ್ಕೊಳಗಾಗಿರುವ ಟ್ಯಾಕ್ಸಿ ಚಾಲಕರಿಗೆ ಬ್ಯಾಂಕ್ಗಳು ವಾಹನ ಸಾಲದ ಕಂತು ಕಟ್ಟುವಂತೆ ದಬ್ಬಾಳಿಕೆ ನಡೆಸುತ್ತಿದ್ದಾರೆ.
ಈ ಬಗ್ಗೆ ಸರ್ಕಾರ ಸೂಕ್ತ ಕ್ರಮಕೈಗೊಂಡು ಸಂಬಂಧಿಸಿದ ಬ್ಯಾಂಕ್ಗಳಿಗೆ ಅಧಿಸೂಚನೆ ನೀಡಬೇಕೆಂದು ದಿನೇಶ್ ಕುಂಪಲ ಎಂ. ತಿಳಿಸಿದರು.