ಗುಂಡ್ಯ (ದಕ್ಷಿಣ ಕನ್ನಡ): ಮಂಗಳೂರಿನಲ್ಲಿದ್ದ ಮೂವರು ಯಾತ್ರಿಕರನ್ನು ಕರೆದುಕೊಂಡು ಹೋಗಲು ಬಂದಿದ್ದ ಕಾರು ಚಾಲಕನನ್ನು ಗುಂಡ್ಯ ಚೆಕ್ಪೋಸ್ಟ್ನಲ್ಲಿ ತಡೆದು ತಮಿಳುನಾಡಿಗೆ ವಾಪಸ್ ಕಳುಹಿಸಿದ್ದಾರೆ.

ಮಂಗಳೂರಿನಲ್ಲಿ ಉಳಿದುಕೊಂಡಿದ್ದ ಯಾತ್ರಿಕರನ್ನು ಕರೆದೊಯ್ಯಲು ತಮಿಳುನಾಡಿನ ದಿಂಡಿಗಲ್ನಿಂದ ಬಂದಿದ್ದ. ಈತ ತಮಿಳುನಾಡು ಮತ್ತು ಕರ್ನಾಟಕ ಸರ್ಕಾರಗಳ ಇ-ಪಾಸ್ ಹೊಂದಿದ್ದ. ಆದರೆ, ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವೇಶ ಕಲ್ಪಿಸುವ ಗುಂಡ್ಯ ಚೆಕ್ಪೋಸ್ಟ್ನಲ್ಲಿ ತಪಾಸಣೆ ನಡೆಸಿದ ಅಧಿಕಾರಿಗಳು ಜಿಲ್ಲೆಗೆ ಪ್ರವೇಶ ನೀಡಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.
ಮಾತ್ರವಲ್ಲದೇ, ಈ ಬಗ್ಗೆ ಸ್ಪಷ್ಟನೆ ಕೇಳಲು ಅಧಿಕಾರಿಗಳಿಗೆ ಕರೆ ಮಾಡಿದರೂ ಕರೆ ಸ್ವೀಕರಿಸಲಿಲ್ಲ ಎಂದು ಚಾಲಕ ಆರೋಪಿಸಿದ್ದಾರೆ. ನಿನ್ನೆ ಸಂಜೆ 5 ಗಂಟೆಯಿಂದ ಇಂದು ಬೆಳಗ್ಗೆವರೆಗೂ ಚೆಕ್ಪೋಸ್ಟ್ನಲ್ಲೇ ತಡೆ ಹಾಕಲಾಗಿದೆ.
ಈ ಕುರಿತು ಮಾತನಾಡಿದ ಕಾರು ಚಾಲಕ ರಾಜು, ಪಾಸ್ ನೀಡುವಾಗ ಸರಿಯಾದ ಮಾನದಂಡಗಳನ್ನು ಪಾಲಿಸುತ್ತಿಲ್ಲ. ಪಾಸ್ ಇದ್ದರೂ ಜಿಲ್ಲೆಗೆ ಪ್ರವೇಶ ನೀಡಿಲ್ಲ ಎಂದ ಮೇಲೆ ಇ-ಪಾಸ್ ನೀಡಿ ಏನು ಪ್ರಯೋಜನ. ಅರ್ಜಿ ಸಲ್ಲಿಸಿದಾಗ ಪಾಸ್ಗಳನ್ನು ತಿರಸ್ಕರಿಸಬೇಕಿತ್ತು. ಬದಲಾಗಿ ಗಡಿ ಪ್ರವೇಶಕ್ಕೆ ಅವಕಾಶ ನೀಡದಿರುವುದು ಸರಿಯಾದ ಕ್ರಮವಲ್ಲ ಎಂದು ಆರೋಪಿಸಿದರು.
ಗಡಿಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿ ಈ ಕುರಿತು ಮಾತನಾಡಿ, ಜಿಲ್ಲಾಡಳಿತದ ಆದೇಶದಂತೆ ಪಾಸ್ ಪಡೆಯಬೇಕಾಗುತ್ತದೆ. ಇಂತಹ ಪಾಸ್ ಅವರು ಪಡೆಯದ ಕಾರಣ ಈ ಗೊಂದಲ ಉಂಟಾಗಿದೆ. ಕಾರು ಚಾಲಕ ಯಾರನ್ನು ಕರೆದೊಯ್ಯಬೇಕು ಎಂದುಕೊಂಡಿದ್ದರೋ ಅವರನ್ನು ಬೇರೆ ವಾಹನದಲ್ಲಿ ಗಡಿವರೆಗೂ ಕರೆಸಿಕೊಂಡು ಆನಂತರ ಪ್ರಯಾಣ ಮುಂದುವರೆಸುವಂತೆ ಹೇಳಲಾಗಿತ್ತು ಎಂದಿದ್ದಾರೆ.