ಪುತ್ತೂರು: ಎಪಿಎಂಸಿಯಿಂದ ಪರವಾನಿಗೆ ಪಡೆಯದೇ ಹಾಗೂ ಪರವಾನಿಗೆ ನವೀಕರಿಸದೇ ಕದ್ದು ಮುಚ್ಚಿ ವ್ಯಾಪಾರ ಮಾಡುವ ವರ್ತಕರ ಅಂಗಡಿಗಳಿಗೆ ಕಾನೂನು ರೀತಿಯಲ್ಲಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಎಪಿಎಂಸಿ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ದಿನೇಶ್ ಮೆದು ಕಾರ್ಯದರ್ಶಿಗೆ ಸೂಚಿಸಿದರು.
ಪುತ್ತೂರು ಎಪಿಎಂಸಿ ಸಾಮಾನ್ಯ ಸಭೆ ಅಧ್ಯಕ್ಷ ದಿನೇಶ್ ಮೆದು ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಎಪಿಎಂಸಿ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಎಪಿಎಂಸಿ ಪ್ರಾಂಗಣದೊಳಗೆ ನಡೆಯುವ ವ್ಯವಹಾರಕ್ಕಿಂತ ಅಧಿಕವಾಗಿ ಗ್ರಾಮಾಂತರ ಪ್ರದೇಶದಲ್ಲಿ ನಡೆಯುತ್ತಿದೆ. ವರ್ತಕರು ಮನೆ ಮನೆಗಳಿಗೆ ಹೋಗಿ ಖರೀದಿಸುತ್ತಿದ್ದಾರೆ. ಈ ರೀತಿ ಪರವಾನಿಗೆ ಪಡೆಯದೇ ವ್ಯಾಪಾರ ಮಾಡುತ್ತಿರುವುದರಿಂದ ನಮಗೆ ವ್ಯಾಪಾರ ಕುಂಠಿತವಾಗಿದೆ ಎಂದು ಪ್ರಾಂಗಣದ ವರ್ತಕರಿಂದ ದೂರುಗಳು ಬಂದಿದೆ ಎಂದು ಅಧ್ಯಕ್ಷ ದಿನೇಶ್ ಮೆದು ತಿಳಿಸಿದರು.
ಪರವಾನಿಗೆ ಪಡೆಯದೆ ವ್ಯವಹಾರ ಮಾಡುವ ವರ್ತಕರ ಅಂಗಡಿಗಳಿಗೆ ಮುಟ್ಟುಗೋಲು ಹಾಕಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದ್ದು, ಪರವಾನಿಗೆ ಇಲ್ಲದೆ ವ್ಯವಹರಿಸಲು ಯಾರಿಗೂ ಅವಕಾಶ ಕೊಡಬಾರದು. ಪರವಾನಿಗೆ ನವೀಕರಿಸದಿರುವವರಿಗೆ ಹಾಗೂ ಪರವಾನಗಿ ಇಲ್ಲದವರಿಗೆ ನೋಟೀಸ್ ನೀಡಿ ಪರವಾನಿಗೆ ಪಡೆದುಕೊಳ್ಳಲು 10 ದಿನಗಳ ಕಾಲಾವಕಾಶ ನೀಡಬೇಕು. ಆ ಬಳಿಕವೂ ಪರವಾನಿಗೆ ಪಡೆದುಕೊಳ್ಳದೆ ಕದ್ದು ಮುಚ್ಚಿ ವ್ಯಹಾರ ನಡೆಸುವವರ ವಿರುದ್ಧ ಅಧಿಕಾರಿಗಳು ಯಾರ ಒತ್ತಡಗಳಿಗೂ ಬಲಿಯಾಗದೆ ದಿಟ್ಟ ಕ್ರಮ ಕೈಗೊಳ್ಳಬೇಕು ಎಂದು ಅವರು ಎಪಿಎಂಸಿ ಕಾರ್ಯದರ್ಶಿ ರಾಮಚಂದ್ರ ಅವರಿಗೆ ಸೂಚನೆ ನೀಡಿದರು. ಈ ವಿಚಾರಕ್ಕೆ ಸಂಬಂಧಿಸಿ ಸದಸ್ಯರು ಹಸ್ತಕ್ಷೇಪ ಮಾಡಬಾರದು ಎಂದು ಅವರು ವಿನಂತಿಸಿಕೊಂಡರು.