ಮಂಗಳೂರು: ನಿಫಾ ವೈರಸ್ ಶಂಕೆ ಹಿನ್ನೆಲೆ ಗೋವಾ ಮೂಲದ ವ್ಯಕ್ತಿಯೊಬ್ಬರು ಮಂಗಳೂರಿನಲ್ಲಿ ಪರೀಕ್ಷೆಗೆ ಒಳಗಾಗಿದ್ದಾರೆ. ನಾಳೆಯೊಳಗೆ ವರದಿ ಬರುವ ಸಾಧ್ಯತೆಯಿದೆ. ನೆರೆಯ ರಾಜ್ಯ ಕೇರಳದಲ್ಲಿ ಭಾರಿ ಆತಂಕ ಮೂಡಿಸಿರುವ ನಿಫಾ, ರಾಜ್ಯಕ್ಕೂ ಕಾಲಿಟ್ಟಿದೆಯಾ ಅನ್ನೋ ಅನುಮಾನ ಕಾಡುತ್ತಿದೆ.
ತಪಾಸಣೆಗೊಳಪಟ್ಟಿರುವ ವ್ಯಕ್ತಿ ಗೋವಾದಲ್ಲಿ ಆರ್ಟಿ-ಪಿಸಿಆರ್ ಕಿಟ್ ತಯಾರಿಸುವ ಲ್ಯಾಬ್ವೊಂದರಲ್ಲಿ ಮೈಕ್ರೋ ಬಯಾಲಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದ. ಎರಡು ದಿನಗಳ ಹಿಂದೆ ಜ್ವರ ಬಂದು ಗುಣಮುಖನಾಗಿದ್ದ ಈತ, ನಿಫಾ ವೈರಸ್ ಬಂದಿರಬಹುದೆಂಬ ಶಂಕೆ ಹಿನ್ನೆಲೆ ಟೆಸ್ಟ್ ಮಾಡಿಸಿದ್ದಾನೆ.
ಈತ ಗೋವಾದಿಂದ ಕಾರವಾರಕ್ಕೆ ಬಂದು, ಅಲ್ಲಿಂದ ಮಣಿಪಾಲಕ್ಕೆ ತೆರಳಿ ಅಲ್ಲಿಂದ ಮಂಗಳೂರಿಗೆ ಬಂದಿದ್ದಾನೆ. ಈತನ ಮಾದರಿ ಪಡೆದಿರುವ ಆರೋಗ್ಯ ಇಲಾಖೆ ಪರೀಕ್ಷೆಗೆ ಕಳಿಸಿದ್ದು, ಇಂದು ಅಥವಾ ನಾಳೆ ರಿಪೋರ್ಟ್ ಬರಲಿದೆ. ಆತನನ್ನು ಮಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಐಸೋಲೇಷನ್ ಮಾಡಲಾಗಿದೆ.
ಇದನ್ನೂ ಓದಿ: NIPAH ಆತಂಕ : ಬಾವಲಿಗಳಿಗೆ ಬಲೆ ಹಾಕಿದ ಪುಣೆ ವೈರಾಲಜಿ ಸಂಸ್ಥೆ ಮತ್ತು ಅರಣ್ಯ ಇಲಾಖೆಯ ತಜ್ಞರು
ಈ ಕುರಿತು ಈ ಟಿವಿ ಭಾರತದೊಂದಿಗೆ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್, ಆ ವ್ಯಕ್ತಿ ಲ್ಯಾಬ್ನಲ್ಲಿ ಕೆಲಸ ಮಾಡುತ್ತಿದ್ದ ಹಿನ್ನೆಲೆ ಸ್ವಇಚ್ಛೆಯಿಂದ ತಪಾಸಣೆಗೊಳಪಟ್ಟಿದ್ದಾರೆ. ಅವರಲ್ಲಿ ರೋಗದ ಯಾವುದೇ ಗುಣಲಕ್ಷಣ ಇರಲಿಲ್ಲ. ಆ ವ್ಯಕ್ತಿಯ ಮಾದರಿ ಪಡೆದು ಪರೀಕ್ಷೆಗೆ ಕಳುಹಿಸಲಾಗಿದೆ. ಇಂದು ಅಥವಾ ನಾಳೆ ರಿಪೋರ್ಟ್ ಬರಲಿದೆ ಎಂದು ಹೇಳಿದರು.