ಮಂಗಳೂರು : ಇಲ್ಲಿನ ವೆನ್ಲಾಕ್ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದ ಶಂಕಿತ ಕೊರೊನಾ ಪೀಡಿತ ವ್ಯಕ್ತಿ ಮತ್ತೆ ಸಿಕ್ಕಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ದುಬೈನಿಂದ ಮಂಗಳೂರಿಗೆ ಬಂದಿದ್ದ ಈ ವ್ಯಕ್ತಿಯನ್ನು ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ತಪಾಸಣೆ ಮಾಡಿದಾಗ ಆತನಿಗೆ ಜ್ವರವಿರೋದು ಕಂಡು ಬಂದಿದೆ. ಈ ಹಿನ್ನೆಲೆ ಆತನನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ವಿಶೇಷ ವಾರ್ಡ್‌ಗೆ ದಾಖಲಿಸಲಾಗಿತ್ತು. ಆದರೆ, ಇಂದು ಮುಂಜಾನೆ ಆತ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದ.
ಪೊಲೀಸರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಹುಡುಕಾಟ ನಡೆಸಿ ನಾಪತ್ತೆಯಾದ ವ್ಯಕ್ತಿಯನ್ನು ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ರಂಗರಮಜಲು ಎಂಬಲ್ಲಿ ಸಂಬಂಧಿಕರ ಮನೆಯಲ್ಲಿ ಪತ್ತೆ ಹಚ್ಚಿದ್ದಾರೆ. ಈತನನ್ನು ಪೊಲೀಸರು ಮತ್ತು ವೈದ್ಯಾಧಿಕಾರಿಗಳು ಮನವೊಲಿಸಿ ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಈತನ ರಕ್ತದ ಮಾದರಿ ಪಡೆದು ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.