ಮಂಗಳೂರು: ಬೀದಿಬದಿ ವ್ಯಾಪಾರಿಗಳ ಗುರುತಿಸುವಿಕೆಗೆ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳಿಂದ ಸರ್ವೇ ಕಾರ್ಯ ಮಾತ್ರ ನಡೆದಿದ್ದು, ಇನ್ನೂ ಪಟ್ಟಿ ಅಂತಿಮಗೊಳಿಸಿಲ್ಲ. ಬೀದಿಬದಿ ವ್ಯಾಪಾರಿಗಳಿಂದ 50 ರೂ. ಪಡೆದು ಸಮೀಕ್ಷೆ ನಡೆಸಲಾಗುತ್ತದೆ ಎಂದು ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ಹೇಳಿದ್ದಾರೆ.
ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಡೆದ ಚರ್ಚೆಯಲ್ಲಿ ಮನಪಾ ಸದಸ್ಯ ಕಿರಣ್ ಕುಮಾರ್, ಪಾಲಿಕೆ ವ್ಯಾಪ್ತಿಯಲ್ಲಿ ಟೈಗರ್ ಕಾರ್ಯಾಚರಣೆ ನಡೆಸುವ ಬದಲು ಅಧಿಕಾರಿಗಳು ಪಾಲಿಕೆ ಸದಸ್ಯರ ಗಮನಕ್ಕೆ ತರದೆ ಬೀದಿಬದಿ ವ್ಯಾಪಾರಸ್ಥರ ಸರ್ವೇ ಕಾರ್ಯ ಮಾಡಿ ಅವರಿಂದ 50 ರೂ. ತೆಗೆದುಕೊಳ್ಳುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಬಹಳಷ್ಟು ಸದಸ್ಯರೂ ದನಿಗೂಡಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಆಯುಕ್ತ ಅಕ್ಷಯ್ ಶ್ರೀಧರ್, ಯಾವುದೇ ವಿಚಾರವನ್ನು ಮನಪಾ ಸದಸ್ಯರ ಗಮನಕ್ಕೆ ತರದೆ ಅಧಿಕಾರಿಗಳು ಈ ರೀತಿ ನಡೆಸಿರೋದು ತಪ್ಪು. ಮುಂದಿನ ದಿನಗಳಲ್ಲಿ ಪಾಲಿಕೆ ಸದಸ್ಯರಿಗೆ ತಿಳಿಸಿಯೇ ಕಾರ್ಯ ನಿರ್ವಹಿಸಬೇಕೆಂದು ಎಚ್ಚರಿಕೆ ನೀಡುತ್ತೇನೆ ಎಂದರು.
ಓರ್ವನನ್ನು ಬೀದಿಬದಿ ವ್ಯಾಪಾರಿ ಎಂದು ಪರಿಗಣಿಸಬೇಕಾದಲ್ಲಿ ನೇರವಾಗಿ ಐಡಿ ಕಾರ್ಡ್ ನೀಡಲು ಸಾಧ್ಯವಿಲ್ಲ. ಅವರಿಂದ 50 ರೂಪಾಯಿ ಪಡೆದು ಸರ್ವೇ ನಡೆಸಲಾಗುತ್ತಿದೆ. ಅಲ್ಲದೆ ಅದಕ್ಕೆ ಒಂದಷ್ಟು ನಿಯಮಗಳಿವೆ. ವ್ಯಾಪಾರಿಗಳು ಫುಟ್ಪಾತ್ನಲ್ಲಿ, ಜನರಿಗೆ ತೊಂದರೆ ಕೊಡುವ ರೀತಿಯಲ್ಲಿ ವ್ಯಾಪಾರ ಮಾಡಬಾರದೆನ್ನುವ ಬೇರೆ ಬೇರೆ ನಿಯಮಗಳಿವೆ. ಈಗ ಅದಕ್ಕಾಗಿ ಸಮೀಕ್ಷೆ ಕಾರ್ಯ ಮಾತ್ರ ನಡೆಯುತ್ತಿದೆ ಹೊರತು, ಯಾವುದೇ ಅಂತಿಮ ನಿರ್ಧಾರವಾಗಿಲ್ಲ ಎಂದಿದ್ದಾರೆ.
ಇದನ್ನೂ ಓದಿ: 'ವಿದೇಶಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ದೊರಕಿಸಲು ಸರ್ಕಾರ ಬದ್ಧ'