ಸುಳ್ಯ (ದಕ್ಷಿಣ ಕನ್ನಡ): ಸುಳ್ಯ ತಾಲೂಕಿನ ಹರಿಹರ ಪಲ್ಲತಡ್ಕ, ಕೊಲ್ಲಮೊಗ್ರು ಕಡೆಗಳಲ್ಲಿ ನೆರೆಭಾದಿತ ಪ್ರದೇಶಗಳ ವೀಕ್ಷಣೆಗೆ ತೆರಳಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಅವರನ್ನು ಇಲ್ಲಿನ ಹೊಂಡ ಗುಂಡಿಗಳಿಂದ ಕೂಡಿದ ರಸ್ತೆಗಳನ್ನು ತೋರಿಸದೇ ದಾರಿ ತಪ್ಪಿಸಿ ಸ್ಥಳೀಯ ಬಿಜೆಪಿ ನಾಯಕರು ಕರೆದುಕೊಂಡು ಹೋಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಪ್ರವಾಹ ಪೀಡಿತ ಪ್ರದೇಶಗಳಿಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನೀಲ್ ಕುಮಾರ್ ಅವರು ನಿನ್ನೆ ಭೇಟಿ ನೀಡಿದ್ದರು. ಆ ಬಳಿಕ ಸುಳ್ಯ ತಾಲೂಕಿನ ಕೊಲ್ಲಮೊಗ್ರುವಿಗೆ ತೆರಳಲು ಸಚಿವರು ಸಿದ್ದರಾಗಿದ್ದರು. ಈ ಸಮಯದಲ್ಲಿ ಹದಗೆಟ್ಟು ಹೊಂಡಮಯವಾಗಿರುವ ಮಳೆಯಾಳ ಹರಿಹರ ರಸ್ತೆ ಮೂಲಕ ಹೋಗಿ ಈ ರಸ್ತೆಯ ದುಃಸ್ಥಿತಿ ನೋಡುವಂತೆ ಸಚಿವರಿಗೆ ಸ್ಥಳೀಯರು ವಿನಂತಿ ಮಾಡಿದರು.
ಸಚಿವ ಸುನೀಲ್ ಕುಮಾರ್ ಮತ್ತು ಜಿಲ್ಲಾಧಿಕಾರಿ ಇದಕ್ಕೆ ಒಪ್ಪಿದ್ದರು. ಆದರೆ, ಸುಳ್ಯದ ಬಿಜೆಪಿ ನಾಯಕರು ಈ ರಸ್ತೆಯಲ್ಲಿ ಸಚಿವರನ್ನು ಕರೆದುಕೊಂಡು ಹೋದರೆ ತಮ್ಮ ಬಂಡವಾಳ ಬಯಲಾಗಬಹುದು ಎಂದು ಹೆದರಿ ಸಚಿವರ ದಾರಿಯನ್ನು ತಪ್ಪಿಸಿ ಬೇರೆ ರಸ್ತೆಯಲ್ಲಿ ಕರೆದುಕೊಂಡು ಹೋಗಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಸುಳ್ಯ ತಾಲೂಕಿನ ಮಳೆಯಾಳ ಹರಿಹರ ರಸ್ತೆಯೂ ಸಂಪೂರ್ಣ ಹದಗೆಟ್ಟಿದೆ. ಈಗಾಗಲೇ ಮತದಾನ ಬಹಿಷ್ಕಾರ ಬ್ಯಾನರೂ ಹಾಕಲಾಗಿದೆ. ಈ ಬಗ್ಗೆ ಸ್ಥಳದಲ್ಲಿ ನೆರೆದ ಮಾಧ್ಯಮ ಪ್ರತಿನಿಧಿಗಳು ಸಚಿವರ ಗಮನಕ್ಕೆ ತಂದರು. ಆದರೆ, ಮಧ್ಯ ಪ್ರವೇಶಿಸಿದ ಕೊಲ್ಲಮೊಗ್ರು ಗ್ರಾಮ ಪಂಚಾಯಿತಿ ಅಧ್ಯಕ್ಷ ಉದಯಕುಮಾರ್ ಕೊಪ್ಪಡ್ಕ ಗದ್ದಲ ಎಬ್ಬಿಸಿ, ಇಲ್ಲಿ ರಸ್ತೆ ಸರಿ ಮಾಡಿಸಲು ಕಾರ್ಯಕರ್ತರು ನಾವಿದ್ದೇವೆ. ನಾವೇ ರಸ್ತೆಗೆ ಅನುದಾನ ತರಿಸಿ ಅಭಿವೃದ್ಧಿ ಮಾಡುತ್ತೇವೆ. ಅದಕ್ಕೆ ಮಾಧ್ಯಮದವರ ಅಗತ್ಯವಿಲ್ಲ, ನೀವು ನಿಮ್ಮ ಕೆಲಸ ನೋಡಿ ಎಂದು ಉದ್ದಟತನ ತೋರಿಸಿದ್ದಾರೆ.
ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸ್ಥಳೀಯ ಗ್ರಾಮಸ್ಥರು, ಸಚಿವ ಸುನೀಲ್ ಕುಮಾರ್ ಮತ್ತು ಜಿಲ್ಲಾಧಿಕಾರಿ ಸಂಚರಿಸುವ ರಸ್ತೆಯನ್ನೇ ತಡೆದರು. ಮಾಧ್ಯಮ ಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಎಷ್ಟೇ ಪ್ರಯತ್ನಪಟ್ಟರೂ, ಸಚಿವರಿಗೆ ಸಮಯ ಇಲ್ಲ ಎಂದು ಹೇಳಿದ ಸ್ಥಳೀಯ ಬಿಜೆಪಿ ನಾಯಕರು ಬೇರೆ ರಸ್ತೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಕರೆದುಕೊಂಡು ಹೋದರು. ಇದರಿಂದಾಗಿ ಈ ಭಾಗದ ರಸ್ತೆಯ ಸ್ಥಿತಿಯನ್ನು ಸಚಿವರು ನೋಡದಂತಾದದ್ದು ಒಂದು ಕಡೆಯಾದರೆ, ಸ್ಥಳೀಯ ಬಿಜೆಪಿ ನಾಯಕರೂ ಮಾನ ಹೋಗದೇ ಬಚಾವಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
ಇದನ್ನೂ ಓದಿ: ಭಟ್ಕಳದಲ್ಲಿ ನೆರೆ ಹಾನಿ: ಅಂಗಡಿ, ಮೀನುಗಾರಿಕಾ ಬೋಟ್ಗಳಿಗೆ ವಿಶೇಷ ಅನುದಾನ ಒದಗಿಸಲು ಸಿಎಂ ಭರವಸೆ!