ಮಂಗಳೂರು: ರಾಜ್ಯ ಸರ್ಕಾರ ಘೋಷಿಸಿರುವ ಸಂಡೇ ಲಾಕ್ಡೌನ್ಗೆ ಮಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನ ಓಡಾಟ, ವಾಹನ ಸಂಚಾರವಿಲ್ಲದೆ ನಗರ ಸಂಪೂರ್ಣ ಸ್ತಬ್ಧಗೊಂಡಿದೆ.
ಶನಿವಾರ ರಾತ್ರಿ 8 ಗಂಟೆಯಿಂದಲೇ ಲಾಕ್ಡೌನ್ ಶುರುವಾಗಿದ್ದು, ಸದ್ಯ ಅಗತ್ಯ ಸೇವೆಯ ಹೊರತು ಉಳಿದ ಎಲ್ಲ ಸೇವೆಗಳನ್ನು ಪೊಲೀಸರು ಬಂದ್ ಮಾಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಸಂಡೇ ಲಾಕ್ ಡೌನ್ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಖಾಸಗಿ ವಾಹನಗಳು, ಬಸ್, ರಿಕ್ಷಾಗಳ ಸಂಚಾರಕ್ಕೆ ಸಂಪೂರ್ಣ ಬ್ರೇಕ್ ಬಿದ್ದಿದೆ. ರಸ್ತೆಯಲ್ಲಿ ಜನಸಂಚಾರವೂ ಇಲ್ಲದೆ ಬಿಕೋ ಎನ್ನುತ್ತಿರುವ ದೃಶ್ಯ ಕಂಡುಬರುತ್ತಿದೆ.
ಹಾಲು, ಪೆಟ್ರೋಲ್ ಹಾಗೂ ಮೆಡಿಕಲ್ ಬಿಟ್ಟರೆ ಉಳಿದಂತೆ ಅಂಗಡಿ ಮುಂಗಟ್ಟುಗಳು, ಹಣ್ಣು, ತರಕಾರಿ, ಹೂ, ಮೀನು, ಮಾಂಸ ಮಾರುಕಟ್ಟೆಯೂ ಬಂದ್ ಇದೆ. ಜನಸಾಮಾನ್ಯರು ಸಂಡೇ ಲಾಕ್ ಡೌನ್ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಯನ್ನು ನಿನ್ನೆಯೇ ಮಾಡಿರುವ ಕಾರಣ ಇಂದು ಯಾರೂ ರಸ್ತೆಗಿಳಿದಿಲ್ಲ.
ಪೊಲೀಸರು ಅಲ್ಲಲ್ಲಿ ಬ್ಯಾರಿಕೇಡ್ ಬಳಸಿ ತಪಾಸಣೆ ನಡೆಸುತ್ತಿದ್ದು, ಅನಗತ್ಯ ವಾಹನ ಸಂಚಾರಕ್ಕೆ ಕಡಿವಾಣ ಹಾಕುತ್ತಿದ್ದಾರೆ.