ಉಳ್ಳಾಲ: ತಾಯಿಯ ಹುಟ್ಟುಹಬ್ಬದಂದು ಶುಭಾಶಯ ತಿಳಿಸಲು ಇಡೀ ದಿನವೂ ಹಾಸ್ಟೆಲ್ ವಾರ್ಡನ್ ಮೊಬೈಲ್ ನೀಡದ್ದರಿಂದ ಮನನೊಂದ ವಿದ್ಯಾರ್ಥಿ ಡೆತ್ನೋಟ್ ಬರೆದಿಟ್ಟು, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಕಿನ್ಯಾ ಶಾರದಾ ವಿದ್ಯಾನಿಕೇತನದಲ್ಲಿ ಭಾನುವಾರ ಬೆಳಕಿಗೆ ಬಂದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಮೂಲದ 14 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಶನಿವಾರ (ಜೂನ್ 11) ಬಾಲಕನ ತಾಯಿ ಹುಟ್ಟಿದ ದಿನವಾಗಿತ್ತು. ಮನೆಯವರ ಜೊತೆ ಮಾತನಾಡಲು ಮೊಬೈಲ್ ಕೇಳಿದಾಗ ಶಾಲಾ ಆಡಳಿತ ಮಂಡಳಿಯ ನಿಯಮದಂತೆ ಹಾಸ್ಟೆಲ್ ವಾರ್ಡನ್ ತಿರಸ್ಕರಿಸಿದ್ದರು ಎನ್ನಲಾಗ್ತಿದೆ.
ಮನೆ ಮಂದಿಯೂ ಕೂಡ ವಿದ್ಯಾರ್ಥಿಯನ್ನು ಸಂಪರ್ಕಿಸಲು ಸುಮಾರು ಸಲ ಕರೆ ಮಾಡಿದ್ದರೂ ವಾರ್ಡನ್ ಮಾತನಾಡಲು ಬಿಟ್ಟಿರಲಿಲ್ಲ. ರಾತ್ರಿ 12 ಗಂಟೆಯವರೆಗೂ ಮಂಕಾಗಿ ಕುಳಿತಿದ್ದ ಬಾಲಕ ಹಾಸ್ಟೆಲ್ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ.
ಡೆತ್ ನೋಟಲ್ಲಿ ಏನಿದೆ?: ತಾಯಿಗೆ ಹುಟ್ಟುಹಬ್ಬದ ಶುಭಾಶಯಗಳು. ಎಲ್ಲರೂ ಖುಷಿಯಾಗಿರಿ, ಶಾಲೆಗೆ ತನಗಾಗಿ ಕಟ್ಟಿರುವ ಶುಲ್ಕವನ್ನು ವಾಪಸ್ ಪಡೆದುಕೊಳ್ಳಿ. ನಿಮ್ಮಿಂದ ನಾನು ದೂರವಾಗುತ್ತಿದ್ದೇನೆ. ನೀವು ನನ್ನನ್ನು ದುಃಖಕ್ಕೆ ತಳ್ಳಿದಿರಿ. ಯಾರೂ ಕೂಗಬೇಡಿ ಎಂದು ಬಾಲಕ ಇಂಗ್ಲಿಷ್ನಲ್ಲಿ ಬರೆದಿರುವ ಡೆತ್ ನೋಟ್ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಾಗ ಇತರ ವಿದ್ಯಾರ್ಥಿಗಳು ಹಾಸ್ಟೆಲ್ ಪ್ರಮುಖರ ಗಮನಕ್ಕೆ ತಂದಿದ್ದರು. ಸದ್ಯ ಮೃತದೇಹವನ್ನು ಶವ ಮಹಜರಿಗೆ ಕಳುಹಿಸಿರುವ ಉಳ್ಳಾಲ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ಮದ್ದೂರು ಎಟಿಎಂ ದರೋಡೆ ಪ್ರಕರಣ: ಓರ್ವನ ಬಂಧನ, ನಾಲ್ವರಿಗೆ ಶೋಧ