ಪುತ್ತೂರು(ದಕ್ಷಿಣ ಕನ್ನಡ): ಪುತ್ತೂರು ರಾಮಕೃಷ್ಣ ಪ್ರೌಢಶಾಲೆಯ ನೇತೃತ್ವದಲ್ಲಿ ಕೊಂಬೆಟ್ಟಿನಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ರಾಜ್ಯಮಟ್ಟದ 17ರ ವಯೋಮಾನದ ಪ್ರೌಢಶಾಲಾ ಬಾಲಕ, ಬಾಲಕಿಯರ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿದೆ. ಜಿಲ್ಲೆ 61 ಅಂಕಗಳನ್ನು ಪಡೆದು ಸತತ 10ನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಬಾಲಕರ ವಿಭಾಗದಲ್ಲಿ ಬೆಂಗಳೂರು ವಿದ್ಯಾನಗರ ಸ್ಪೋರ್ಟ್ ಶಾಲೆ 21 ಅಂಕಗಳನ್ನು ಪಡೆದು ಪ್ರಥಮ, 17 ಅಂಕಗಳನ್ನು ಪಡೆದ ದಕ್ಷಿಣ ಕನ್ನಡ ಜಿಲ್ಲೆ ದ್ವಿತೀಯ ಸ್ಥಾನ ಪಡೆಯಿತು. ಬಾಲಕಿಯರ ವಿಭಾಗದಲ್ಲಿ 44 ಅಂಕಗಳನ್ನು ಪಡೆದ ದಕ್ಷಿಣ ಕನ್ನಡ ಪ್ರಥಮ, 21 ಅಂಕಗಳನ್ನು ಪಡೆದ ಶಿರಸಿ ದ್ವಿತೀಯ ಸ್ಥಾನ ಗೆದ್ದುಕೊಂಡಿದೆ. ಒಟ್ಟು ಕ್ರೀಡಾಕೂಟದಲ್ಲಿ 61 ಅಂಕಗಳನ್ನು ಪಡೆದ ದಕ್ಷಿಣ ಕನ್ನಡ ಜಿಲ್ಲೆಗೆ ಸಮಗ್ರ ಪ್ರಶಸ್ತಿ ಒಲಿಯಿತು.
ಸಾಮರಸ್ಯ ಸಾಧಿಸಲು ಕ್ರೀಡೆ ಮುಖ್ಯ- ರೈ: ಕ್ರೀಡಾಕೂಟದ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ, "ಕ್ರೀಡೆ ದೈಹಿಕವಾಗಿ ನಮ್ಮ ಆರೋಗ್ಯ ರಕ್ಷಣೆಯ ಜೊತೆ ಸಮಾಜದ ಆರೋಗ್ಯಕ್ಕೂ ಬಹಳ ಅಗತ್ಯ. ಸಾಮರಸ್ಯದ ಬದುಕಿನ ರೀತಿಯನ್ನು ಕ್ರೀಡೆ ಕಲಿಸುತ್ತದೆ. ನಮ್ಮ ಮಧ್ಯೆ ಇರುವ ಅವಿಶ್ವಾಸವನ್ನು ದೂರ ಮಾಡಲು ಕ್ರೀಡೆ ಅಗತ್ಯ" ಎಂದರು.
ದಾಖಲೆಗಳು: 43.34 ಮೀಟರ್ ದೂರ ಹ್ಯಾಮರ್ ಎಸೆದು ಶಿರಸಿಯ ಧನ್ಯಾ ಸಿ.ನಾಯ್ಕ್ ತಮ್ಮದೇ ದಾಖಲೆ ಮುರಿದರು. ಈ ಹಿಂದೆ 2022ರಲ್ಲಿ ಮೈಸೂರಿನಲ್ಲಿ ನಡೆದ ಕ್ರೀಡಾಕೂಟದಲ್ಲಿ 38.90 ದೂರ ಎಸೆದಿದ್ದು ಅವರ ಹೆಸರಿನಲ್ಲಿದ್ದ ದಾಖಲೆ ಆಗಿತ್ತು. 1500 ಮೀ. ಓಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಚರಿಷ್ಮಾ ಬೆಂಗಳೂರಿನ ಅರ್ಪಿತಾ ಬಿ. ಅವರ ದಾಖಲೆ ಮುರಿದರು. ಅರ್ಪಿತಾ ಬಿ. 1,500 ಮೀ ಓಟವನ್ನು 04.58.19 ಸಮಯದಲ್ಲಿ ಮುಗಿಸಿದ್ದರು. ಚರಿಷ್ಮಾ 04.55.10 ಸಮಯದಲ್ಲಿ ಗುರಿ ಮುಟ್ಟಿ ದಾಖಲೆ ಮಾಡಿದರು.
ಜಾವೆಲಿನ್ ಥ್ರೋನಲ್ಲಿ ಬೀದರ್‌ನ ಪುಷ್ಪಕ್ ನೆಲ್ವಾಡೆ 57.06 ಮೀಟರ್ ದೂರ ಎಸೆದು, 2016ರಲ್ಲಿ ಸುನಿಲ್ ಕುಮಾರ್ ಬಿ. (53.00) ಮಾಡಿದ್ದ ದಾಖಲೆ ಮುರಿದಿದ್ದಾರೆ. ವಿದ್ಯಾನಗರದ ಸವೇದ್ ಶಬೀರ್ 800 ಮೀಟರ್ ಓಟದ ಸ್ಪರ್ಧೆಯನ್ನು ವಿದ್ಯಾನಗರದ 01.57.56 ಸಮಯದಲ್ಲಿ ಮುಕ್ತಾಯ ಮಾಡಿ, 2016ರ ದಿನೇಶ್ ಎಮ್.ನಾಯಕ್ (02.00.76 ಸೆ) ದಾಖಲೆ ಮುರಿದರು.
ಇದನ್ನೂ ಓದಿ: ಬಂಟ್ವಾಳದ ಧನೇಶ್ ಶೆಟ್ಟಿ ಈಗ ಇಂಡೋನೇಶ್ಯಾ ಕ್ರಿಕೆಟ್ ತಂಡದ ಆಲ್‌ರೌಂಡರ್