ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಯ ಮೌಲ್ಯಮಾಪನ ಕಾರ್ಯ ಇಂದಿನಿಂದ ಆರಂಭವಾಗಿದೆ.
ಕೊರೊನಾ ವೈರಸ್ ಹಾವಳಿ ನಡುವೆ ಪದವಿ ಪರೀಕ್ಷೆ ಯಶಸ್ವಿಯಾಗಿ ನಡೆದಿದ್ದು ಇದರ ಮೌಲ್ಯಮಾಪನವನ್ನು ಎರಡು ಕಡೆ ನಡೆಸಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ರಥಬೀದಿಯ ಡಾ ಪಿ.ದಯಾನಂದ ಪೈ ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಉಡುಪಿ ಎಂಜಿಎಂ ಕಾಲೇಜಿನಲ್ಲಿ ಮೌಲ್ಯಮಾಪನ ನಡೆಯುತ್ತಿದೆ. ಮಂಗಳೂರು ಮೌಲ್ಯಮಾಪನ ಕೇಂದ್ರದಲ್ಲಿ 400ಮಂದಿ ಮೌಲ್ಯಮಾಪಕರು ಕಾರ್ಯನಿರ್ವಹಿಸಲಿದ್ದಾರೆ.
ಸ್ಯಾನಿಟೈಸೇಶನ್, ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಪಾಡಿಕೊಂಡು ಮೌಲ್ಯಮಾಪನ ನಡೆಸಲಾಗುತ್ತಿದೆ. ಮೌಲ್ಯಮಾಪನ ಆರಂಭಕ್ಕೂ ಮುಂಚೆ ನಡೆದ ಸಭೆಯಲ್ಲಿ ಮಂಗಳೂರು ವಿವಿ ಮೌಲ್ಯಮಾಪನ ಕುಲಸಚಿವ ಪ್ರೊ. ಪಿಎಲ್ ಧರ್ಮ, ವಾಣಿಜ್ಯ ಶಾಸ್ತ್ರ ಪರೀಕ್ಷಾ ಮಂಡಳಿಯ ಅಧ್ಯಕ್ಷ ಶಿರ್ವದ ಸುಂದರರಾಮ ಶೆಟ್ಟಿ ಕಾಲೇಜಿನ ಪ್ರೊ. ಕೆ ಜಿ ಮಂಜುನಾಥ್, ಸುಬ್ರಹ್ಮಣ್ಯದ ಕೆಎಸ್ಎಸ್ ಕಾಲೇಜಿನ ಪ್ರೊ. ಬಾಲಕೃಷ್ಣ ಪೈ. ಪಿ, ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಾಜಶೇಖರ ಹೆಬ್ಬಾರ್.ಸಿ ಮೊದಲಾದವರು ಉಪಸ್ಥಿತರಿದ್ದರು.