ಬೆಳ್ತಂಗಡಿ: ಗ್ರಾಮೀಣ ಭಾಗದಲ್ಲಿ ಪಡಿತರ ವಿತರಣೆಗೆ ಒಟಿಪಿ ಸಮಸ್ಯೆ ಕಂಡು ಬಂದಲ್ಲಿ ಒಟಿಪಿ ರಹಿತವಾಗಿ ಪಡಿತರ ವಿತರಣೆಗೆ ಮುಂದಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ತಾಲೂಕು ಪಂಚಾಯತ್ ಸಭಾಭವನದಲ್ಲಿ ಸೋಮವಾರ ಸಂಸದರು, ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈಗಾಗಲೇ ಕುಚ್ಚಲು ಅಕ್ಕಿ ವಿತರಿಸಲು ಕ್ರಮಕೈಗೊಳ್ಳಲಾಗಿದೆ. ಪಡಿತರ ವಿತರಣೆಗೆ ಏನೆಲ್ಲ ಕ್ರಮ ಕೈಗೊಂಡಿದ್ದೀರಿ ಎಂದು ತಹಶೀಲ್ದಾರ್ ಗಣಪತಿ ಶಾಸ್ತ್ರಿ ಅವರನ್ನ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಶಾಸ್ತ್ರಿ ತಾಲೂಕಿನಲ್ಲಿ 66 ಪಡಿತರ ಅಂಗಡಿಗಳಲ್ಲಿ ಒಟಿಪಿ ಮುಖಾಂತರ ಪಡಿತರ ವಿತರಿಸಲಾಗುತ್ತಿದೆ. ಪ್ರಸಕ್ತ ಏ.1ರಿಂದ ಏ.6ರವರೆಗೆ ಶೇ.34.63ರಷ್ಟು ವಿತರಣೆಯಾಗಿದೆ. ಎಳನೀರಿನಲ್ಲಿ ಒಟಿಪಿ ಸಮಸ್ಯೆಯಾಗಿರುವುದು ಹೊರತಾಗಿ, ಬೇರೆಲ್ಲ ಕಡೆಗಳಲ್ಲೂ ಒಟಿಪಿ ಮುಖಾಂತರವೇ ವಿತರಿಸಲಾಗುತ್ತಿದೆ. ಉಳಿದಂತೆ ಸ್ವಯಂ ಸೇವಕರ ಮೂಲಕ ಮನೆಗೆ ವಿತರಿಸಲಾಗುತ್ತಿದೆ ಎಂದರು. ಪ್ರತಿ ದಿವಸಕ್ಕೆ ಒಂದು ಪಡಿತರ ಅಂಗಡಿಯಲ್ಲಿ 200 ಮಂದಿಗೆ ವಿತರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ತಾಲೂಕಿಗೆ ಕುಚ್ಚಲು ಅಕ್ಕಿ ದಾಸ್ತಾನು ಆಗದಿರುವುದರಿಂದ ಈವರೆಗೆ ಎಲ್ಲೂ ವಿತರಣೆಯಾಗಿಲ್ಲ ಎಂದು ಸಚಿವರ ಗಮನ ಸೆಳೆದರು. ಜಿಲ್ಲೆಯ ಇತರೆಡೆಗಳಲ್ಲಿ ವಿತರಣೆಗೆ ಮುಂದಾಗಿದ್ದು ನಾಳೆಯಿಂದ ವಿತರಣೆಗೆ ಕ್ರಮವಹಿಸಲಾಗುವುದು. ಶೇ.40 ಕುಚ್ಚಲು ಹಾಗೂ ಶೇ.60ರಂತೇ ಬೆಳ್ತಿಗೆ ಅಕ್ಕಿ ವಿತರಿಸಲಾಗುವುದು ಎಂದು ಸಚಿವರು ಸೂಚಿಸಿದರು.
234 ಮಂದಿ ಹೋಂ ಕ್ವಾರಂಟೈನ್: ತಾಲೂಕಿನಲ್ಲಿ ಕೊರೊನಾ ನಿಗಾದಲ್ಲಿರುವವರ ಮಾಹಿತಿ ನೀಡಿದ ತಾಲೂಕು ಆರೋಗ್ಯಾಧಿಕಾರಿ ಡಾ.ಕಲಾಮಧು, ತಾಲೂಕಿನಲ್ಲಿ 234 ಮಂದಿ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಇದರಲ್ಲಿ ಒಬ್ಬರಿಗೆ ಸೋಂಕು ಪತ್ತೆಯಾಗಿದೆ. ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದರು. 234 ಮಂದಿ ಪೈಕಿ 218 ಮಂದಿ 14 ದಿನಗಳ ಅವಧಿ ಪೂರ್ಣಗೊಳಿದ್ದಾರೆ. 50 ಮಂದಿ 28 ದಿವಸ ಪೂರ್ಣಗೊಳಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಸೋಂಕು ಪತ್ತೆಯಾದ ಕಲ್ಲೇರಿ ಪ್ರದೇಶದ ಮೇಲೆ ನಿಗಾ: ಕಲ್ಲೇರಿಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಹಾಗೂ ಖಾಸಗಿ ವೈದ್ಯರನ್ನು ಸೇವೆಗೆ ಬಳಸಿಕೊಳ್ಳುವಂತೆ ಸಂಸದ ನಳೀನ್ ಕುಮಾರ್ ಕಟೀಲ್ ಚರ್ಚಿಸಿದರು. ಶಾಸಕ ಹರೀಶ್ ಪೂಂಜ ಪ್ರತಿಕ್ರಿಯಿಸಿ, ಈಗಾಗಲೇ ಕಲ್ಲೇರಿಯಲ್ಲಿ ಪಾಸಿಟಿವ್ ಪ್ರಕರಣ ಪತ್ತೆಯಾದ ಬಳಿಕ ಕಾಲೋನಿಯ 88 ಮನೆಗಳನ್ನು ನಿಗಾದಲ್ಲಿರಿಸಲಾಗಿದೆ. ಪ್ರತ್ಯೇಕ ಆ್ಯಂಬುಲೆನ್ಸ್ ಸೇವೆ ಒದಗಿಸಲಾಗಿದೆ. ಉಳಿದಂತೆ ದಾನಿಗಳ ನೆರವಿನಿಂದ ಗ್ರಾಪಂ, ತಾಲೂಕು ಆಡಳಿತ ಆಹಾರ ಕಿಟ್ ಸೇರಿದಂತೆ ಅಗತ್ಯ ವಸ್ತುಗಳನ್ನ ಒದಗಿಸುತ್ತಿದೆ ಎಂದರು.