ಪುತ್ತೂರು (ದ.ಕ): ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಇಲ್ಲಿನ ಮಿನಿ ವಿಧಾನಸೌಧದಲ್ಲಿರುವ ತಾಲೂಕು ಕಚೇರಿ ಸಭಾಂಗಣದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು.
ಸರಳವಾಗಿ ಕಾರ್ಯಕ್ರಮ ಹಮ್ಮಿಕೊಂಡು ಸೀಮಿತ ಅತಿಥಿಗಳಿಗೆ ಆಹ್ವಾನ ನೀಡಲಾಗಿತ್ತು. ಇನ್ನೂ ಈ ವೇಳೆ ಮಾತನಾಡಿದ ಶಾಸಕ ಸಂಜೀವ ಮಠಂದೂರು, ನಾವು ಮಾಡುವ ಕಾರ್ಯವನ್ನು ಯಾವುದೇ ಫಲಾಪೇಕ್ಷೆಯಿಲ್ಲದೆ ಮಾಡಬೇಕು. ಸೇವೆಯನ್ನು ಕರ್ತವ್ಯ ಎಂದು ಅರಿತು ಮಾಡಬೇಕು ಎಂದು ಶ್ರೀಕೃಷ್ಣ ಬೋಧಿಸಿದ್ದು ಇದನ್ನು ಪ್ರತಿಯೊಬ್ಬ ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು ಜೀವನದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಶ್ರೀಕೃಷ್ಣನ ವ್ಯಕ್ತಿತ್ವ ವಿಭಿನ್ನವಾದುದು. ಅವನು ಜಗತ್ತಿನ ಪ್ರಥಮ ಮನೋವಿಜ್ಞಾನಿ ಎಂದು ಜಗತ್ತೇ ಒಪ್ಪಿಕೊಂಡಿದೆ. ಭಗವದ್ಗೀತೆಯಲ್ಲಿ ಜೀವನ ಸಾರವನ್ನು ಹೊಂದಿದ್ದು ಅದನ್ನೇ ಅರ್ಜುನನಿಗೂ ಬೋಧಿಸಿದ್ದಾನೆ. ಬದಲಾವಣೆ ಜಗದ ನಿಯಮ ಎಂದು ಶ್ರೀಕೃಷ್ಣನು ಬೋಧಿಸಿದ್ದು ಇಂದು ಶೇ.100ರಷ್ಟು ಸಾರ್ಥಕತೆಯನ್ನು ಕಾಣುತ್ತಿದ್ದೇವೆ ಎಂದರು.
ಮುಖ್ಯ ಅತಿಥಿಯಾಗಿದ್ದ ಯಾಧವ ಸಂಘದ ಅಧ್ಯಕ್ಷ ಇ.ಎಸ್.ವಾಸುದೇವ ಮಾತನಾಡಿ, ವಿವಿಧ ಕಾರ್ಯಕ್ರಮಗಳೊಂದಿಗೆ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮುಖಾಂತರ ನಡೆಯುತ್ತಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿಯು ನೆರೆ, ಕೊಡಗು ದುರಂತ ಹಾಗೂ ಈ ವರ್ಷದ ಕೊರೊನಾದಿಂದಾಗಿ ಸಾಂಕೇತಿಕವಾಗಿ ನಡೆಯುತ್ತಿದೆ ಎಂದರು. ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಸಹಾಯಕ ಆಯುಕ್ತ ಡಾ.ಯತೀಶ್ ಉಲ್ಲಾಳ್, ತಹಶೀಲ್ದಾರ್ ರಮೇಶ್ ಬಾಬು ವೇದಿಕೆಯಲ್ಲಿ ಉಪಸ್ಥಿತರಿದ್ದರು.