ಮಂಗಳೂರು: ಎಲ್ಲಾ ಅನುಕೂಲತೆಗಳು ಇದ್ದೂ ಪರೀಕ್ಷೆಯಲ್ಲಿ ಮಾರ್ಕ್ಸ್ ಗಿಟ್ಟಿಸಲು ಹೆಣಗಾಡುವವರ ಮಧ್ಯೆ ತನ್ನಲ್ಲಿರುವ ಅಂಗವೈಕಲ್ಯತೆಯನ್ನು ಮೆಟ್ಟಿ ನಿಂತು ಪಿಯುಸಿಯಲ್ಲಿ 83.33% ಅಂಕ ಗಳಿಸಿ ಟಿ. ವಿಘ್ನೇಶ್ ರಾವ್ ಎಂಬ ವಿದ್ಯಾರ್ಥಿ ಸಾಧನೆ ಮಾಡಿದ್ದಾರೆ.
ನಗರದ ಸಂತ ಅಲೋಶಿಯಸ್ ಪಿ.ಯು. ಕಾಲೇಜಿನ ವಿದ್ಯಾರ್ಥಿಯಾಗಿರುವ ಟಿ. ವಿಘ್ನೇಶ್ ರಾವ್ ಗೆ ನಡೆದಾಡಲು ವಾಕಿಂಗ್ ಸ್ಟಿಕ್ ಆಧಾರವಾಗಿರಬೇಕು. ಬಲಗಣ್ಣಿನ ದೃಷ್ಟಿಯಲ್ಲಿಯೂ ಸ್ವಲ್ಪ ದೋಷವಿದೆ. ಮಾತನಾಡುವಾಗಲೂ ತೊದಲುತ್ತಾರೆ. ಎಡಗೈಯಲ್ಲಿ ಸ್ವಾಧೀನವಿಲ್ಲ. ಆದರೂ ಇದೆಲ್ಲವೂ ತನ್ನ ಸಾಧನೆಗೆ ತೊಡಕಲ್ಲ ಎಂದು ಗಟ್ಟಿ ನಿರ್ಧಾರಗೈದ ಇವರು, ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600 ರಲ್ಲಿ 500 ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಎಸ್ಎಸ್ಎಲ್ಸಿ ಯಲ್ಲಿಯೂ ಅವರು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದರು.
ಬಿದ್ದು ಪೆಟ್ಟಾಗಿ ಅಂಗವೈಕಲ್ಯ: ಯಾವುದೇ ಅಂಗ ಊನವಿಲ್ಲದೆ ಎಲ್ಲರಂತೆ ಹುಟ್ಟಿರುವ ವಿಘ್ನೇಶ್ ರಾವ್ ಐದನೇ ತರಗತಿವರೆಗೆ ಎಲ್ಲ ಮಕ್ಕಳಂತೆ ಆಡಿ ಬೆಳೆದ. ಆದರೆ 2013ರ ಏಪ್ರಿಲ್ 14 ರಂದು ಆಟ ಆಡುತ್ತಿರುವಾಗ ಮೇಲಿನಿಂದ ಬಿದ್ದು, ಕಬ್ಬಿಣದ ಸರಳುಗಳು ತಲೆ, ಮುಖ ಹಾಗೂ ಕಾಲಿಗೆ ಸೇರಿ ನಾಲ್ಕೈದು ಕಡೆಗೆ ಚುಚ್ಚಿಕೊಂಡು ಬಹುದೊಡ್ಡ ಆಘಾತವೇ ಸಂಭವಿಸಿತ್ತು. ಪ್ರಜ್ಞೆಯಿಲ್ಲದೆ ಒಂದು ತಿಂಗಳ ಕಾಲ ಐಸಿಯುನಲ್ಲಿ ಹೋರಾಟ ನಡೆಸಿದ. ಸುಮಾರು ಎರಡು-ಮೂರು ತಿಂಗಳ ಆಸ್ಪತ್ರೆಯ ಚಿಕಿತ್ಸೆಯ ಬಳಿಕ ಮನೆಗೆ ಬಂದ ಬಳಿಕ ವಿಘ್ನೇಶ್ ಹೆತ್ತವರಾದ ಟಿ. ಸುಬ್ರಹ್ಮಣ್ಯ ರಾವ್ ಹಾಗೂ ನಳಿನಿ ಎಸ್. ರಾವ್ ಅವರ ಆರೈಕೆಯಿಂದ ಅದೇ ವರ್ಷದ ಅಕ್ಟೋಬರ್ ನಿಂದ ಶಾಲೆಗೆ ಹೊರಡಲು ಆರಂಭಿಸಿಯೇ ಬಿಟ್ಟ.
ಬೆನ್ನೆಲುಬಾದ ತಾಯಿ: ಅಶೋಕ ನಗರದಲ್ಲಿನ ಅಶೋಕ ವಿದ್ಯಾಲಯದ ವಿದ್ಯಾರ್ಥಿಯಾಗಿದ್ದ ಆ ಸಂದರ್ಭದಲ್ಲಿ ಹತ್ತರ ವಯಸ್ಸಿನ ಬಾಲಕನನ್ನು ತಾಯಿ ಅಥವಾ ತಂದೆ ಅನಾಮತ್ತಾಗಿ ಎತ್ತಿಕೊಂಡೇ ಶಾಲೆಗೆ ಹೋಗಲು ಶುರು ಮಾಡಿದರು. ಬರೆಯಲು ಶಕ್ತಿಯಿಲ್ಲದ, ಮಾತನಾಡಲು ತ್ರಾಣವಿಲ್ಲದ, ನಡೆಯಲೂ ಶಕ್ತಿಯಿಲ್ಲದ ಬಾಲಕ ವಿಘ್ನೇಶ್ ರಾವ್ ಗೆ ತಾಯಿ ಶಿಕ್ಷಣಕ್ಕೆ ನೆರವಾದರು. ಸಹಪಾಠಿಗಳ ನೋಟ್ಸ್ ಗಳನ್ನು ತಂದು ತಾಯಿ ನಳಿನಿಯವರೇ ಬರೆದು, ವಿಘ್ನೇಶ್ ಗೆ ಓದಿ ಕಲಿಸುವ ಪ್ರಯತ್ನ ಮಾಡುತ್ತಿದ್ದರು. ಅದನ್ನೇ ಗ್ರಹಿಸಿ, ಮನನ ಮಾಡುತ್ತಿದ್ದ ಟಿ. ವಿಘ್ನೇಶ್ ರಾವ್ ಒಂದೊಂದೇ ತರಗತಿಗಳನ್ನು ತೇರ್ಗಡೆಯಾಗುತ್ತಲೇ ಬಂದು ಎಸ್ಎಸ್ಎಲ್ಸಿಯಲ್ಲಿ 72% ಅಂಕ ಗಳಿಸಿ ಪ್ರಥಮ ಶ್ರೇಣಿ ಗಳಿಸಿದರು. ಬಳಿಕ ಹೆತ್ತವರ ನಿರ್ಧಾರದಂತೆ ನಗರದ ಸಂತ ಅಲೋಶಿಯಸ್ ಸಂಜೆ ಕಾಲೇಜಿನಲ್ಲಿ ಕಾಮರ್ಸ್ ಅಧ್ಯಯನ ಆರಂಭಿಸಿದ.
ದಿನವೂ ಸಂಜೆ 5 ಗಂಟೆಯಿಂದ ರಾತ್ರಿ ಎಂಟರವರೆಗೆ ತರಗತಿ ನಡೆಯುತ್ತಿದ್ದರೆ, ತಂದೆಯೇ ದಿನವೂ ತಮ್ಮ ಆಟೋರಿಕ್ಷಾದಲ್ಲಿ ಅವರನ್ನು ಕರೆದುಕೊಂಡು ಹೋಗಿ ಮನೆಗೆ ಕರೆದುಕೊಂಡು ಬರುತ್ತಾರೆ. ಮನೆಯಲ್ಲಿ ತಾಯಿ, ಪರಿಚಯದವರೊಬ್ಬರ ಸಹಾಯದಿಂದ ಪಿಯುಸಿ ವಿಷಯಗಳನ್ನು ಅಭ್ಯಾಸ ಮಾಡುತ್ತಾರೆ.
ಈ ಬಗ್ಗೆ ಆಟೋರಿಕ್ಷಾ ಚಾಲಕರಾಗಿ ದುಡಿಯುತ್ತಿರುವ ವಿಘ್ನೇಶ್ ತಂದೆ ಟಿ. ಸುಬ್ರಹ್ಮಣ್ಯ ರಾವ್ ಮಾತನಾಡಿ, ಪಿಯುಸಿ ಪರೀಕ್ಷೆಯಲ್ಲಿ ವಿಘ್ನೇಶ್ ಸಾಧನೆ ಕಂಡು ನಮಗೆ ಬಹಳ ಸಂತೋಷವಾಗುತ್ತಿದೆ. ಅವನ ಅಂಗವೈಕಲ್ಯವನ್ನು ಮೆಟ್ಟಿ ನಿಂತು ಈ ಸಾಧನೆಯನ್ನು ಮಾಡಿದ್ದಾನೆ. ವಿಘ್ನೇಶ್ ಗೆ ಪರೀಕ್ಷೆ ಬರೆಯಲು ಅಲೋಶಿಯಸ್ ಕಾಲೇಜಿನ ಪ್ರಥಮ ಪಿಯುಸಿಯ ಆರ್ಟ್ಸ್ ವಿದ್ಯಾರ್ಥಿ ಪ್ರೀತಂ ಕೃಷ್ಣ ಸಹಾಯ ಮಾಡಿದ್ದಾನೆ. ಮುಂದೆಯೂ ಪರೀಕ್ಷೆ ಬರೆಯಲು ತಾನು ಇದೇ ರೀತಿ ಸಹಾಯ ಮಾಡುತ್ತೇನೆ ಎಂದಿದ್ದಾನೆ ಎಂದು ಹೇಳುತ್ತಾರೆ.