ಸುಬ್ರಹ್ಮಣ್ಯ: ಇತ್ತೀಚೆಗೆ ಸುಬ್ರಹ್ಮಣ್ಯ ವಲಯ ರಕ್ಷಿತಾರಣ್ಯದಲ್ಲಿ ಮರ ಕಳ್ಳತನ ಆಗುತ್ತಿರುವ ಬಗ್ಗೆ ದೂರು ನೀಡಿರುವ ಐತ್ತೂರು ಮೂಜೂರು ನಿವಾಸಿ ಪ್ರಸಾದ್ ಎಂಬುವವರ ಮನೆ ಮೇಲೆ ಅರಣ್ಯಾಧಿಕಾರಿಗಳಿಂದ ನಡೆದ ದಾಳಿಯನ್ನು ಖಂಡಿಸಿರುವ ಸಾಮಾಜಿಕ ಕಾರ್ಯಕರ್ತರು ಮುಂದಿನ ಹೋರಾಟದ ರೂಪುರೇಷೆಗಾಗಿ ಪ್ರಸಾದ್ ಅವರ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಇತ್ತ ರೈತ ಸಂಘದ ಪದಾಧಿಕಾರಿಗಳು ಕಡಬ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ನೀತಿ ಸಾಮಾಜಿಕ ಸಂಘಟನೆಯ ರಾಜ್ಯಾಧ್ಯಕ್ಷ ಜಯನ್ ಟಿ. ಹಾಗೂ ಉಪ್ಪಿನಂಗಡಿಯ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಡಿಕೋಸ್ತ ಹಾಗು ಅಬ್ದುಲ್ ರಹಿಮಾನ್ ಅವರು ಅರಣ್ಯಾಧಿಕಾರಿಗಳು ದಾಳಿ ನಡೆಸಿದ ರೈತ ಪದ್ಮಯ್ಯ ಗೌಡ ಅವರ ಮನೆಗೆ ರವಿವಾರ ಭೇಟಿ ನೀಡಿ ಮಾತುಕತೆ ನಡೆಸಿದರು.
ಬಳಿಕ ಕಡಬ ಪೊಲೀಸ್ ಠಾಣೆಗೆ ಭೇಟಿ ನೀಡಿದ ಅವರು ಸುದ್ದಿಗಾರರ ಜೊತೆ ಮಾತನಾಡಿ, ಅರಣ್ಯಾಧಿಕಾರಿಗಳು ಮರಗಳ್ಳತನ ಬಗ್ಗೆ ದೂರು ನೀಡಿದ ದೂರುದಾರ ಪ್ರಸಾದ್ ಅವರನ್ನು ಗುರಿಯಾಗಿರಿಸಿಕೊಂಡು ಮನೆಗೆ ನುಗ್ಗಿ ದೌರ್ಜನ್ಯ ನಡೆಸಿದ್ದಾರೆ. ಅಧಿಕಾರ ದುರುಪಯೋಗಪಡಿಸಿಕೊಂಡು ಸುಳ್ಳು ಪ್ರಕರಣ ದಾಖಲಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದರು. ಇಷ್ಟೆಲ್ಲಾ ಅದರೂ ಇಲ್ಲಿನ ಜನಪ್ರತಿನಿಧಿಗಳು ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸದಿರುವುದು ದುರಂತ. ಆದರೆ ನಾವು ಸುಮ್ಮನಿರುವುದಿಲ್ಲ. ತಪ್ಪಿತಸ್ಥ ಅರಣ್ಯಾಧಿಕಾರಿಗಳ ವಿರುದ್ಧ ಕಾನೂನು ಹೋರಾಟದ ಜೊತೆಗೆ ಇನ್ನಿತರೆ ಹೋರಾಟ ಮಾರ್ಗಗಳ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ ಎಂದರು.
ಓದಿ: ಸ್ವಾಮೀಜಿಗಳು ರಾಜಕೀಯದಲ್ಲಿ ಮೂಗು ತೂರಿಸುವುದು ಸಲ್ಲದು; ಸಂಸದ ವಿ. ಶ್ರೀನಿವಾಸ ಪ್ರಸಾದ್
ಇನ್ನು ಸುಳ್ಯ ತಾಲೂಕು ರೈತ ಸಂಘದ ಪದಾಧಿಕಾರಿಗಳು, ಕಾರ್ಯಕರ್ತರು ಕಡಬ ಪೊಲೀಸ್ ಠಾಣೆಯ ಮುಂದೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. ವೃದ್ಧ ರೈತ ಮಹಿಳೆಯೊಬ್ಬರು ದಾಂಧಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಈ ತನಕ ಕಡಬ ಪೊಲೀಸರು ಎಫ್ಐಆರ್ ದಾಖಲಿಸಲು ಮುಂದಾಗದೇ ಅರಣ್ಯ ಇಲಾಖೆಗೆ ಬೆಂಬಲವಾಗಿ ನಿಂತಿರುವುದು ವಿಷಾದದ ಸಂಗತಿ ಎಂದು ಆರೋಪಿಸಿ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ಪ್ರತಿಭಟನೆ ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪವನ್ನು ಪಡೆಯಲಿದೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.