ಪುತ್ತೂರು : ಮಾದಕ ವಸ್ತು ಸೇವನೆ ಮುಕ್ತ ಸ್ವಸ್ಥ ಸಮಾಜಕ್ಕಾಗಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನ ವತಿಯಿಂದ ಸಹಿ ಸಂಗ್ರಹ ಅಭಿಯಾನವು ಇಂದು ಮಿನಿ ವಿಧಾನಸೌಧದ ಮುಂಭಾಗದಲ್ಲಿ ನಡೆಯಿತು.
ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ ಸಹಿ ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಹಿಂದು ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಮಾದಕ ವ್ಯಸನಗಳ ಸೇವನೆಯಿಂದ ಇಂದು ಯುವ ಸಮಾಜ ದಾರಿ ತಪ್ಪುತ್ತಿದ್ದಾರೆ. ಇದರ ಹಿಂದೆ ಪ್ರಭಾವಿ ವ್ಯಕ್ತಿಗಳ ಕೈವಾಡವಿದೆ. ಮಾದಕ ಜಾಲದ ವಿರುದ್ಧ ರಾಜಕೀಯ ರಹಿತ ಹೋರಾಟ ಅಗತ್ಯವಿದೆ. ಸ್ವಸ್ಥ ಸಮಾಜದ ನಿರ್ಮಾಣಕ್ಕಾಗಿ ಸರ್ಕಾರ ಕಠಿಣ ಕಾನೂನು ಜಾರಿಗೊಳಿಸಿ ಮಾದಕ ದ್ರವ್ಯ ದಂಧೆಗೆ ಕಡಿವಾಣ ಹಾಕುವಂತೆ ಆಗ್ರಹಿಸಿದರು.
ಎಬಿವಿಪಿ ಮುಖಂಡ ಜಗದೀಶ್ ಮಾತನಾಡಿ, ಡ್ರಗ್ಸ್ ಜಾಲದಲ್ಲಿ ಶ್ರೀಮಂತರು, ರಾಜಕೀಯ ನಾಯಕರ ಮಕ್ಕಳು ತೊಡಗಿದ್ದಾರೆ. ಕಾಲೇಜು ಕ್ಯಾಂಪಸ್ ಗಳಲ್ಲಿ ಅಧಿಕವಾಗಿ ಮಾರಾಟವಾಗುತ್ತಿದ್ದು, ವಿದ್ಯಾರ್ಥಿಗಳನ್ನೇ ಗುರಿಯಾಗಿಸುತ್ತಿದ್ದಾರೆ. ಇದರಿಂದಾಗಿ ಯುವ ಜನಾಂಗ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿದ್ದಾರೆ. ಇದರ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಡ್ರಗ್ಸ್ ಜಾಲದಲ್ಲಿ ತೊಡಗಿದವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದರು.