ಮಂಗಳೂರು : ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮತ್ಸೋದ್ಯಮವು ಸಾವಿರಾರು ಕೋಟಿಗಳ ವ್ಯವಹಾರ ನಡೆಸುತ್ತಿದೆ. ಈ ವ್ಯವಹಾರದ ಜೊತೆಗೆ ಕರಾವಳಿ ಭಾಗದಲ್ಲಿ ಸಿಗಡಿ ಮೀನುಗಳನ್ನು ಬೆಳೆಸುವ ಕೃಷಿಯು ನಡೆಯುತ್ತದೆ. ಅರಬ್ಬಿ ಸಮುದ್ರದ ತಟದಲ್ಲಿನ ಕೆಲವು ಪ್ರದೇಶಗಳಲ್ಲಿ ಅಲ್ಲಲ್ಲಿ ಕೃತಕ ಕೆರೆಗಳನ್ನು ನಿರ್ಮಾಣ ಮಾಡಿ ಈ ಸಿಗಡಿ ಮೀನಿನ ಕೃಷಿ ಮಾಡಲಾಗುತ್ತಿದೆ.
ಇದು ಅತ್ಯಂತ ಲಾಭದಾಯಕವಾದ ಮೀನಿನ ಕೃಷಿಯಾಗಿದ್ದು ಬಹಳ ಮಂದಿ ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಭಾಗದಲ್ಲಿ ಎರಡು ಕಡೆ ಹಾಗೂ ಬಜಿಪೆಯ ಒಂದು ಕಡೆ ಕೃತಕ ಕೆರೆಗಳನ್ನು ನಿರ್ಮಿಸಿ ಸಿಗಡಿ ಕೃಷಿಯನ್ನು ಮಾಡಲಾಗುತ್ತಿದೆ.
ಜಿಲ್ಲೆಯ ವಿವಿಧ ಕಡೆಗಳಲ್ಲಿ ಒಟ್ಟು 15 ಎಕರೆ ಪ್ರದೇಶದಲ್ಲಿ ಕೆರೆ ನಿರ್ಮಾಣ ಸಿಗಡಿ ಕೃಷಿ ನಡೆಸಲಾಗುತ್ತಿದೆ. ಒಂದು ಎಕರೆ ಪ್ರದೇಶದಲ್ಲಿ ಸುಮಾರು 3 ಲಕ್ಷ ಸಿಗಡಿ ಮೀನಿನ ಮರಿಗಳನ್ನು ತಂದು ಕೃತಕ ಕೆರೆಗೆ ಹಾಕಲಾಗುತ್ತದೆ. ಮೂರು ತಿಂಗಳಿಗೆ ಈ 3 ಲಕ್ಷ ಮೀನಿನ ಮರಿಗಳು ಬೆಳೆದು ಸುಮಾರು 4.5 ಟನ್ ಸಿಗಡಿ ಮೀನುಗಳು ಲಭ್ಯವಾಗುತ್ತದೆ. ಮಾರುಕಟ್ಟೆಯಲ್ಲಿ ಸಿಗಡಿ ಮೀನಿನ ತೂಕವನ್ನು ನಿರ್ಧರಿಸಿ, ಪ್ರತಿ ಕೆ.ಜಿ ಗೆ ರೂ 300 ರೂ ನಂತೆ ಮಾರಾಟವಾಗುತ್ತದೆ.
ವಿದೇಶಕ್ಕೂ ರವಾನೆ : ಇಲ್ಲಿ ಬೆಳೆಯುವ ಮೀನುಗಳು ಹೆಚ್ಚಾಗಿ ಹೊರ ರಾಜ್ಯಕ್ಕೆ ಸರಬರಾಜಾಗುತ್ತದೆ. ಮೀನಿನ ಗಾತ್ರ ( ಒಂದು ಕೆ ಜಿ ಯಲ್ಲಿ 30 ಸಿಗಡಿ ಮೀನು ಇದ್ದರೆ) ಅದು ವಿದೇಶಕ್ಕೂ ರಫ್ತಾಗುತ್ತದೆ. ಇನ್ನು ಸಿಗಡಿ ಕೃಷಿಗೆ ನಿರಂತರ ವಿದ್ಯುತ್ ಬೇಕಾಗುತ್ತದೆ. ಕೃಷಿ ಹೊಂಡಗಳಲ್ಲಿ ಇರುವ ಮೀನುಗಳಿಗೆ ವಿದ್ಯುತ್ ಮೂಲಕ ಆಕ್ಷಿಜನ್ ಪೂರೈಕೆ ಮಾಡಲಾಗುತ್ತದೆ. ಸಿಗಡಿ ಮೀನುಗಳ ಮರಿಗಳನ್ನು ಪೂರೈಕೆ ಮಾಡುವ ಸಂಸ್ಥೆಗಳು ಅದನ್ನು ಆಕ್ಸಿಜನ್ ಮೂಲಕ ಬೆಳೆಸುವುದರಿಂದ ಕೆರೆಗಳಲ್ಲೂ ಅದೇ ರೀತಿಯ ವ್ಯವಸ್ಥೆ ಬೇಕಾಗುತ್ತದೆ. ನೀರು ಸ್ವಚ್ಛವಾಗಿರಿಸುವುದು ಮತ್ತು ಪಂಪ್ ಮೂಲಕ ನೀರು ಸರಬರಾಜು ಆಗುವಂತೆ ಸದಾ ಕಾಲ ನೋಡಬೇಕಾಗುತ್ತದೆ. ಜೊತೆಗೆ ಕಂಪನಿಗಳು ನೀಡುವ ಆಹಾರವನ್ನು ನಿಯಮಿತವಾಗಿ ಪೂರೈಸಬೇಕಾಗುತ್ತದೆ.
ವೆನಮಿ ಸಿಗಡಿ : ಸದ್ಯ ಕರಾವಳಿಯಲ್ಲಿ ವೆನಮಿ ಸಿಗಡಿಗಳನ್ನು ಬೆಳೆಸಲಾಗುತ್ತದೆ. ಈ ಹಿಂದೆ ಟೈಗರ್ ಸಿಗಡಿ ಬೆಳೆಸಲಾಗುತ್ತಿದ್ದರೂ, ಇತ್ತೀಚೆಗೆ ಮೀನಿನ ಕೃಷಿಕರು ವೆನಮಿ ಸಿಗಡಿಗಳತ್ತ ಆಕರ್ಷಿತರಾಗಿದ್ದಾರೆ.
ವರ್ಷದಲ್ಲಿ ಮೂರು ಇಳುವರಿ : ಸಿಗಡಿ ಕೃಷಿಯಲ್ಲಿ ವರ್ಷಕ್ಕೆ ಮೂರು ಬಾರಿ ಇಳುವರಿ ಪಡೆಯಬಹುದು. ಸಿಗಡಿ ಮೀನಿನ ಕೃಷಿಗೆ ಉಪ್ಪು ನೀರು ಅಗತ್ಯವಾಗಿರುವುದರಿಂದ ಮಳೆಗಾಲದಲ್ಲಿ ಇದರ ಕೃಷಿ ಮಾಡಲು ಹೋಗುವುದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 15 ಎಕರೆ ಯಲ್ಲಿ 70 ಟನ್ ನಂತೆ ಮೂರು ಬಾರಿ ಸಿಗಡಿ ಮೀನುಗಳನ್ನು ಪಡೆಯಲಾಗುತ್ತದೆ. ಹೀಗೆ ಈ ಕೃಷಿಯಲ್ಲಿ ವರ್ಷಕ್ಕೆ 2 ಕೋಟಿಗೂ ಅಧಿಕ ವ್ಯವಹಾರ ನಡೆಯುತ್ತದೆ ಎಂದು ಹೇಳುತ್ತಾರೆ ಸಿಗಡಿ ಮೀನು ಕೃಷಿಕರಾದ ವಿನಯ್.
ಓದಿ : ಶ್ರೀಲಂಕಾದಲ್ಲಿ ಭುಗಿಲೆದ್ದ ಪ್ರತಿಭಟನೆ: ಅಧ್ಯಕ್ಷರ ನಿವಾಸಕ್ಕೆ ಮುತ್ತಿಗೆ.. ಗೋತಬಯ ರಾಜಪಕ್ಸ ಪರಾರಿ