ಪುತ್ತೂರು(ದಕ್ಷಿಣ ಕನ್ನಡ) : ಸತ್ಯ ಶಂಕರ್ ಎಂಬ ಟಿವಿ ಮೆಕಾನಿಕ್ ತಮ್ಮ ಲೋಕಲ್ ಬ್ರಾಂಡಿನ ಎಸ್.ಟಿ.ವಿ.ಸಿ ಟಿವಿ ಸಿದ್ದಪಡಿಸಿ ಆತ್ಮನಿರ್ಭರ್ ಪ್ರದರ್ಶಿಸುವ ಮೂಲಕ ಗ್ರಾಹಕರ ಗಮನ ಸೆಳೆದಿದ್ದಾರೆ. ಪುತ್ತೂರಿನಲ್ಲಿ ಕಳೆದ 22 ವರ್ಷಗಳಿಂದ ಟಿವಿ ರಿಪೇರಿಯಲ್ಲಿ ಅನುಭವಹೊಂದಿದ ಸತ್ಯ ಶಂಕರ್, ಟಿವಿ ಕ್ಲಿನಿಲ್ ಎನ್ನುವ ಸಂಸ್ಥೆ ಮಾಲೀಕರಾಗಿದ್ದು, ತನ್ನದೇ ಬ್ರ್ಯಾಂಡ್ನ ಎಲ್.ಇ.ಡಿ ಸ್ಮಾರ್ಟ್ ಟಿವಿ ಹೊರ ತಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕಲ್ಪನೆಯಂತೆ ಭಾರತ ಇಂದು ಆತ್ಮನಿರ್ಭರತೆಯತ್ತ ದಾಪುಗಾಲಿಡುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲೂ ಆತ್ಮನಿರ್ಭರತೆ ಪ್ರದರ್ಶಿಸುವ ಮೂಲಕ ವಿಶ್ವದಲ್ಲೇ ಭಾರತ ಪ್ರಕಾಶಿಸಬೇಕೆನ್ನುವುದು ದೇಶದ ಪ್ರತಿಯೊಬ್ಬ ಪ್ರಜೆಯ ಕನಸೂ ಆಗಿದೆ. ಈ ನಿಟ್ಟಿನಲ್ಲಿ ದೇಶದಲ್ಲಿ ಹೊಸ ಹೊಸ ಆವಿಷ್ಕಾರಗಳು, ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಇಂತಹುದೇ ಒಂದು ಆವಿಷ್ಕಾರ ಮಾಡಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮಾರುಕಟ್ಟೆಗೆ ಒಂದು ಟಿವಿ ಬ್ರ್ಯಾಂಡ್ ಬಂದಿಳಿದಿದೆ.
ಎಸ್ಟಿವಿಸಿ ಟಿವಿ ವಿಶೇಷತೆಗಳು: ಟಿವಿ ಕ್ಲಿನಿಕ್ ಸಂಸ್ಥೆ ಮಾಲೀಕರಾದ ಸತ್ಯ ಶಂಕರ್ ಟಿವಿ ದುರಸ್ತಿಯ ತಮ್ಮ ಅನುಭವವನ್ನು ಧಾರೆಯೆರೆದು ಈ ಅಪೂರ್ವ ಸಾಧನೆ ತೋರಿದ್ದಾರೆ. ಸಾಮಾನ್ಯವಾಗಿ ಎಲ್ಲ ಅಂತಾರಾಷ್ಟ್ರೀಯ ಮಟ್ಟದ ಬೇರೆ ಬೇರೆ ಟಿವಿ ಕಂಪನಿಗಳು ಮಾಡುವಂತೆ ಸ್ಮಾರ್ಟ್ ಟಿವಿಗೆ ಬೇಕಾದಂತಹ ಸ್ಲ್ರೀನ್ ,ಬೋರ್ಡ್, ಬ್ಯಾಕ್ ಲೈಟ್ ಮೊದಲಾದ ಬಿಡಿ ಭಾಗಗಳು ಫ್ಯಾಕ್ಟರಿಗಳಲ್ಲಿ ತಯಾರಾಗುತ್ತದೆ. ಈ ಬಿಡಿ ಭಾಗಗಳನ್ನು ಜೋಡಿಸಿ ಬೃಹತ್ ಟಿವಿ ಕಂಪನಿಗಳು ಅವರವರ ಬ್ಯಾಂಡ್ ಮಾಡಿಕೊಂಡು ಮಾರುಕಟ್ಟೆಗೆ ಟಿವಿಗಳನ್ನು ಬಿಡುಗಡೆ ಮಾಡುತ್ತವೆ.
ಇದೇ ರೀತಿಯಲ್ಲಿ ಸತ್ಯಶಂಕರ್ ತಮ್ಮದೇ ಆದ 26 ಇಂಚಿನ ಟಿವಿಯಿಂದ ಹಿಡಿದು 65 ಇಂಚಿನ ಎಸ್ಟಿವಿಸಿ ಟಿವಿಗಳನ್ನು ಸಿದ್ಧಪಡಿಸಿದ್ದಾರೆ. ಈ ಟಿವಿಯನ್ನು ಗ್ರಾಹಕರ ಅವಶ್ಯಕತೆಗೆ ತಕ್ಕಂತೆ ಪರಿವರ್ತನೆ ಮಾಡಿಕೊಡುವ ಆಪ್ಯ್ ಅನ್ನೂ ನೀಡಿದ್ದಾರೆ. ಸ್ಕ್ರೀನ್, ಮದರ್ ಬೋರ್ಡ್ ಹೊರತುಪಡಿಸಿ ಎಚ್ಡಿ ಇನ್ ಪುಟ್, ಔಟ್ ಪುಟ್ಗಳನ್ನು ಗ್ರಾಹಕರಿಗೆ ಬೇಕಾಗುವಷ್ಟು ಮಾಡಿಕೊಡುತ್ತಿದ್ದಾರೆ.
ಅಲ್ಲದೇ ಈ ಟಿವಿ ದಕ್ಷಿಣಕನ್ನಡದ ಹವಾಮಾನಕ್ಕೆ ಹೊಂದಿಕೊಂಡಿರುವ ರೀತಿಯಲ್ಲಿ ಸಿದ್ದಪಡಿಸಲಾಗಿದೆ. ಜಿಲ್ಲೆಯಲ್ಲಿ ಹೆಚ್ಚಾಗಿ ತೇವಾಂಶ ಹವಾಮಾನವನ್ನು ಹೊಂದಿರುವುದರಿಂದ ಬಹುತೇಕ ಕಂಪನಿಗಳ ಟಿವಿ ಹೆಚ್ಚಿನ ಕಾಲ ಬಾಳಿಕೆ ಬರುತ್ತಿಲ್ಲ. ಟಿವಿ ದುರಸ್ತಿಯ ಈ ಅನುಭವವನ್ನು ಪಡೆದುಕೊಂಡು ದಕ್ಷಿಣಕನ್ನಡ ಜಿಲ್ಲೆಯ ತೇವಾಂಶಕ್ಕೆ ಹೊಂದಿಕೊಳ್ಳುವ ಬೋರ್ಡ್ಗಳನ್ನು ಈ ಟಿವಿಗಳಿಗೆ ಜೋಡಿಸಲಾಗಿದೆ.
ವಿದ್ಯುತ್ ಸಂಪರ್ಕದಲ್ಲಿ ಆಗುತ್ತಿರುವ ವೋಲ್ಟೇಜ್ ಫ್ಲಕ್ಚುವೇಷನ್ನಿಂದಾಗಿ ಬಹುತೇಕ ಟಿವಿಗಳಲ್ಲಿ ಸಮಸ್ಯೆಗಳು ಕಂಡುಬರುತ್ತಿವೆ. ಈ ಕಾರಣಕ್ಕಾಗಿ ಎಸ್.ಟಿ.ವಿ.ಸಿ ಟಿವಿಗಳಲ್ಲಿ ಇಂತಹ ಸಮಯದಲ್ಲಿ ಟಿವಿಗೆ ಯಾವುದೇ ಹಾನಿಯಾಗದ ರೀತಿಯಲ್ಲಿ ಕೆಲವು ಬದಲಾವಣೆಗಳನ್ನೂ ಮಾಡಲಾಗಿದೆ. ತಮ್ಮ ಬ್ರ್ಯಾಂಡ್ನ ಈ ಟಿವಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಈಗಾಗಲೇ ಸಿದ್ಧತೆ ನಡೆಸಿದ್ದು, ಗ್ರಾಹಕರಿಂದಲೂ ಉತ್ತಮ ಸ್ಪಂದನೆ ಬರುತ್ತಿದೆ ಎಂದು ಎಸ್ಟಿವಿಸಿ ಟಿವಿ ಮಾಲೀಕರಾದ ಸತ್ಯಶಂಕರ್ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಈ ವೇಳೆ, ತಮ್ಮ ಟಿವಿಯನ್ನು ಗ್ರಾಹಕರಿಗೆ ಹೆಚ್ಚಿನ ಹೊರೆ ಇಲ್ಲದೇ, ಕೈಗೆಟಕುವ ದರದಲ್ಲಿ ನೀಡಲಾಗುವುದು ಎಂದು ಸತ್ಯಶಂಕರ್ ತಿಳಿಸಿದರು. ಅಂತಾರಾಷ್ಟ್ರೀಯ ಮಟ್ಟದ ಟಿವಿಗಳಿಗೆ ಪೈಪೋಟಿ ನೀಡುವ ಟಿವಿ ಪುತ್ತೂರಿನಲ್ಲಿ ಸಿದ್ಧಗೊಂಡಿರುವುದಕ್ಕೆ ಗ್ರಾಹಕರಿಂದ ಭಾರೀ ಬೆಂಬಲವೂ ವ್ಯಕ್ತವಾಗಿದೆ. ಸತ್ಯಶಂಕರ್ ಅವರ ಈ ಸಾಧನೆ ಪುತ್ತೂರಿಗೆ ಹೆಮ್ಮೆ ತಂದಿದೆ ಎಂದು ಮಾತುಗಳೂ ಕೇಳಿ ಬರಲಾರಂಭಿಸಿವೆ. ಮತ್ತೊಂದೆಡೆ ಸತ್ಯಶಂಕರ್ ಅವರ ಈ ಪ್ರಯತ್ನಕ್ಕೆ ಹ್ಯಾಟ್ಸ್ ಆಫ್ ಹೇಳಲೇ ಬೇಕು.
ಇದನ್ನೂ ಓದಿ :ಮಹಿಳೆಯರ ರಕ್ಷಣೆಗಾಗಿ 'ಆ್ಯಂಟಿ ರೇಪ್ ಫುಟ್ವೇರ್' ಆವಿಷ್ಕಾರ: ಕಲಬುರಗಿ ಹೈಸ್ಕೂಲ್ ವಿದ್ಯಾರ್ಥಿನಿ ಸಾಧನೆ