ಪುತ್ತೂರು: ಅಭಿಷೇಕ ಪ್ರಿಯ ಎಂದೇ ಖ್ಯಾತನಾದ ಶಿವನಿಗೆ ಮಾ.11ರಂದು ಶಿವರಾತ್ರಿಯ ಸಂಭ್ರಮ. ಲಿಂಗರೂಪಿ ಶಿವನನ್ನು ಆರಾಧಿಸುವ ಪುಣ್ಯದಿನ. ಮಹಾಶಿವರಾತ್ರಿಯ ದಿನದಂದು ಈಶ್ವರನ ದೇವಾಲಯಗಳಲ್ಲಿ ವಿಶೇಷ ಆರಾಧನೆಗಳು ನಡೆಯುತ್ತಿದ್ದು, ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವಳದ ತಂತ್ರಿ ಕುಂಟಾರು ರವೀಶ ತಂತ್ರಿ ಅವರ ನೇತೃತ್ವದಲ್ಲಿ ನಡೆದ ಉತ್ಸವದಲ್ಲಿ ಸಂಜೆ ಶ್ರೀ ದೇವರ ಬಲಿ ಉತ್ಸವ ಹೊರಟು ಪಲ್ಲಕಿ ಸೇವೆ, ರಾತ್ರಿ ರಥೋತ್ಸವ, ಕೆರೆ ಉತ್ಸವ ನಡೆಯಿತು.
ಪ್ರದಕ್ಷಿಣೆ ಸೇವೆಯಲ್ಲಿ ಅಧಿಕಗೊಂಡ ಭಕ್ತರು:
ಶಿವರಾತ್ರಿ ನಿಮಿತ್ತ ಪ್ರಾತಃಕಾಲದಿಂದಲೇ ಭಕ್ತರ ಸಂದಣಿ ಇತ್ತು. ಸೇವೆ ಹಾಗೂ ಪ್ರಸಾದ ಸ್ವೀಕರಿಸಲು ಸರದಿಯ ಸಾಲಿನ ವ್ಯವಸ್ಥೆ ಮಾಡಲಾಗಿತ್ತು. ಮಹಾಶಿವರಾತ್ರಿಯ ಪ್ರಯುಕ್ತ ದೇವಾಲಯಕ್ಕೆ ಭೇಟಿ ನೀಡಿದ ಭಕ್ತರು ಶ್ರೀ ದೇವರಿಗೆ ಪ್ರದಕ್ಷಿಣೆ ಹಾಕಿದರು. ಮಹಾ ಶಿವರಾತ್ರಿಯಂದು ರಾತ್ರಿ ಉತ್ಸವ ಸಂದರ್ಭ ನೂರಾರು ಭಕ್ತರು ಶ್ರೀ ದೇವಳದ ಒಳಾಂಗಣದಲ್ಲಿ ಪ್ರದಕ್ಷಿಣೆ ಸೇವೆ ಸಲ್ಲಿಸಿದರು. ವರ್ಷದಿಂದ ವರ್ಷಕ್ಕೆ ಪ್ರದಕ್ಷಿಣೆ ಸೇವೆ ಸಲ್ಲಿಸುವವರ ಸಂಖ್ಯೆ ಅಧಿಕಗೊಂಡಿತ್ತು.
ದೇವಸ್ಥಾನದ ರಾಜಗೋಪುರ ಬಣ್ಣ ಬಣ್ಣದ ವಿದ್ಯುದೀಪಾಲಕೃತಗೊಂಡು ಜಗಮಗಿಸಿದ್ದು ಆಕರ್ಷಿತವಾಗಿತ್ತು. ದೇವಳದ ಸುತ್ತು ಪೌಳಿ, ರಾಜಾಂಗಣ ವಿದ್ಯುತ್ ದೀಪಾಲಂಕೃತಗೊಂಡಿತ್ತು. ರಥವನ್ನು ವರ್ಷಂಪ್ರತಿಯಂತೆ ಗೋವರ್ಧನ್ ಅವರು ಶೃಂಗರಿಸಿದರು. ಕೆರೆಯ ಸುತ್ತು ಮತ್ತು ದೇವರು ಸವಾರಿ ಮಾಡುವ ತೆಪ್ಪವನ್ನು ವಿದ್ಯುತ್ ದೀಪಾಲಕೃಂತದಿಂದ ಅಲಂಕರಿಸಲಾಗಿತ್ತು. ಧ್ಯಾನರೂಢ ಶಿವನ ಪ್ರತಿಮೆಯ ಸುತ್ತ ಶುಚಿತ್ವಗೊಳಿಸಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.