ಪುತ್ತೂರು: ತಾಲೂಕಿನ ತಿಂಗಳಾಡಿಯ ಅಂಗಡಿಯೊಂದರಲ್ಲಿ ಅಗತ್ಯ ಸಾಮಗ್ರಿ ಖರೀದಿಸುತ್ತಿದ್ದ ಹಿಂದೂ ಮಹಿಳೆಗೆ ಅನ್ಯ ಕೋಮಿನ ಯುವಕನೋರ್ವ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಕೈಕೊಳ್ಳಬೇಕೆಂದು ಆಗ್ರಹಿಸಿ ಘಟನಾ ಸ್ಥಳದಲ್ಲಿ ನೂರಾರು ಮಂದಿ ಹಿಂದೂ ಯುವಕರು ಜಮಾಯಿಸಿದ್ದರು.
ಸರ್ವೇ ನೇರೋಳ್ತಡ್ಕದ ಮಹಿಳೆಯೋರ್ವರು ಸೆ.14ರಂದು ಸಂಜೆ ತಿಂಗಳಾಡಿಯಲ್ಲಿರುವ ಸೂಪರ್ ಬಜಾರ್ ಮಳಿಗೆಗೆ ಸಾಮಗ್ರಿ ಖರೀದಿಸಲೆಂದು ಬಂದಿದ್ದರು. ಅಂಗಡಿ ಮಾಲೀಕ ಹಮೀದ್ ಪಟ್ಟೆ ಚಹಾ ಕುಡಿಯಲೆಂದು ಹೊರ ಹೋಗಿದ್ದಾಗ ಅಂಗಡಿಯಲ್ಲಿದ್ದ ಸೊರಕೆ ಓಲೆಮುಂಡೋವು ಸಮೀಪದ ಬದ್ರುದ್ದೀನ್ ಯಾನೆ ಬದ್ರು ಎಂಬಾತ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ತಕ್ಷಣ ಮಹಿಳೆ ಜೋರಾಗಿ ಕೂಗಾಡಿದ್ದು, ಕೂಡಲೇ ಜನ ಸೇರಿದ್ದರಿಂದ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಇದನ್ನೂ ಓದಿ: ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಮುರುಘಾ ಶ್ರೀಗಳಿಗೆ 14 ದಿನ ನ್ಯಾಯಾಂಗ ಬಂಧನ
ಈ ಕುರಿತು ಮಾಹಿತಿ ತಿಳಿದು ನಿನ್ನೆ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ನೂರಾರು ಯುವಕರು ಸ್ಥಳದಲ್ಲಿ ಜಮಾಯಿಸಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಆರೋಪಿಯನ್ನು ಕೂಡಲೇ ಬಂಧಿಸಬೇಕು. ಸೆ.15 ರ ಬೆಳಗ್ಗೆ 8 ಗಂಟೆಯೊಳಗೆ ಬಂಧಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಆರೋಪಿಯನ್ನು ಶೀಘ್ರವೇ ಬಂಧಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ. ಇಂದೂ ಸಹ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಇದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಕೆದಂಬಾಡಿ ಗ್ರಾ.ಪಂ.ಅಧ್ಯಕ್ಷ ರತನ್ ರೈ ಕುಂಬ್ರ, ಉಪಾಧ್ಯಕ್ಷ ಭಾಸ್ಕರ ರೈ ಮಿತ್ರಂಪಾಡಿ, ಸದಸ್ಯರಾದ ಪ್ರವೀಣ್ ಶೆಟ್ಟಿ ತಿಂಗಳಾಡಿ, ವಿಠಲ ರೈ ಮಿತ್ತೋಡಿ, ಟಿಎಪಿಸಿಎಂಎಸ್ ಅಧ್ಯಕ್ಷ ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತು, ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ, ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಅಶೋಕ್ ತ್ಯಾಗರಾಜನಗರ ಸೇರಿದಂತೆ ನೂರಾರು ಮಂದಿ ಸ್ಥಳದಲ್ಲಿದ್ದರು.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ವರದಕ್ಷಿಣೆ ಕಿರುಕುಳ ತಾಳಲಾರದೆ ಗೃಹಿಣಿ ಆತ್ಮಹತ್ಯೆ