ಮಂಗಳೂರು: ಹಿರಿಯ ಪತ್ರಕರ್ತ, ರಂಗಭೂಮಿ ಕಲಾವಿದ ನವೀನ್ ಚಂದ್ರ ಪಾಲ್ (93) ಅವರು ಮಂಗಳೂರಿನ ಬಲ್ಮಠ ವಾಸ್ ಲೇನ್ ನಲ್ಲಿರುವ ಸ್ವಗೃಹದಲ್ಲಿ ಅಸೌಖ್ಯದಿಂದ ನಿಧನ ಹೊಂದಿದ್ದಾರೆ. ಮೃತರು ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಸಮಾಜವಾದಿ ಚಿಂತಕರಾಗಿದ್ದ ಇವರು 1948ರಲ್ಲಿ 'ಸಂಗಾತಿ' ಪಾಕ್ಷಿಕ ಪತ್ರಿಕೆಯನ್ನು ಪ್ರಾರಂಭಿಸಿ, 1950 ರಲ್ಲಿ ವಾರಪತ್ರಿಕೆಯಾಗಿ ಮಾರ್ಪಡಿಸಿದ್ದರು. ಅರುಣೋದಯ ಪತ್ರಿಕೆಯ ಸಂಪಾದಕರಾಗಿದ್ದ ಇವರು ಮುಂಬೈನಲ್ಲಿ ಇಂಡಿಯನ್ ಎಕ್ಸ್ ಪ್ರೆಸ್ ದೈನಿಕದ ಸಂಪರ್ಕಾಧಿಕಾರಿ, ಸೀನಿಯರ್ ಎಕ್ಸಿಕ್ಯೂಟಿವ್, ಎನ್ಲೈಟ್ ವಾರಪತ್ರಿಕೆಯಲ್ಲಿ ಅಸಿಸ್ಟೆಂಟ್ ಎಡಿಟರ್, ಕಾಮರ್ಸ್ ವಾರಪತ್ರಿಕೆಯ ಅಸಿಸ್ಟೆಂಟ್ ಎಡಿಟರ್ ಆಗಿ ಸೇವೆ ಸಲ್ಲಿಸಿದ್ದರು.
ಕಾಲೇಜು ವಿದ್ಯಾರ್ಥಿಯಾಗಿದ್ದಾಗ ವಿದ್ಯಾರ್ಥಿ ನಾಯಕರೂ ಆಗಿದ್ದ ಇವರು, ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದರು. ಅಲ್ಲದೆ ಕಾಪು ಕ್ಷೇತ್ರದಿಂದ ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯಿಂದ 1957 ರಲ್ಲಿ ವಿಧಾನಸಭೆಗೆ ಸ್ಪರ್ಧಿಸಿದ್ದರು. ಸ್ವಾತಂತ್ರ್ಯ ಯೋಧ ಸಮಾಜವಾದಿ ಅಮ್ಮೆಂಬಳ ಬಾಳಪ್ಪರ ನಿಕಟವರ್ತಿಯಾಗಿದ್ದ ನವೀನ್ ಚಂದ್ರ ಪಾಲ್ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಇವರ ಸಾಧನೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಗೌರವಿಸಿದ್ದು, ಯುವವಾಹಿನಿ ಕೇಂದ್ರ ಸಮಿತಿಯಿಂದ ವಿಶು ಕುಮಾರ್ ಪ್ರಶಸ್ತಿ, 2013ರಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಪ್ರಕಾಶನ ಮತ್ತು ಚಾರಿಟೇಬಲ್ ಟ್ರಸ್ಟ್ ಬಿಜೈ, ಆತ್ಮಶಕ್ತಿ ದಶಮ ಸಂಭ್ರಮದ ವಿಶೇಷ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.