ಪುತ್ತೂರು: ನಟ ಪುನೀತ್ ರಾಜ್ ಕುಮಾರ್ ನಿಧನಕ್ಕೆ ಹಿರಿಯ ಕಲಾವಿದ ಉಪ್ಪಿನಂಗಡಿಯ ಎಂ.ಕೆ. ಮಠ ಅವರು ಕಂಬನಿ ಮಿಡಿದಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ರಂಗಭೂಮಿ ಕಲಾವಿದ ಎಂ.ಕೆ. ಮಠ ಅವರು ನಟ ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ ಹಾಗೂ ಯುವರತ್ನ ಚಿತ್ರದಲ್ಲಿ ನಟಿಸಿದ್ದಾರೆ. ನೆಚ್ಚಿನ ನಟನ ಅಕಾಲಿಕ ನಿಧನ ಸುದ್ದಿ ಕೇಳಿ ಅವರು ಆಘಾತಕ್ಕೊಳಗಾಗಿದ್ದಾರೆ.
ಈ ಕುರಿತಂತೆ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ಅಪ್ಪು ಅತ್ಯಂತ ಸರಳ ಜೀವಿಯಾಗಿದ್ದರು. ರಾಜ್ ಕುಟುಂಬದ ಕುಡಿ ಹಾಗೂ ಪವರ್ ಸ್ಟಾರ್ ಆಗಿದ್ದರೂ ಅವರಿಗೆ ಯಾವುದೇ ಹಮ್ಮು ಬಿಮ್ಮುಗಳಿರಲಿಲ್ಲ. ನಮ್ಮ ನಡುವೆ ಆ ರೀತಿಯ ಅಂತರಗಳಿಲ್ಲದೆ ಪೂರ್ವಜನ್ಮದ ಅನುಬಂಧವೇನೂ ಅನ್ನುವಂತೆ ಆತ್ಮೀಯರಾಗಿದ್ದೆವು ಎಂದು ತಮ್ಮ ಹಾಗೂ ಪುನೀತ್ ನಡುವಿನ ಒಡನಾಟವನ್ನು ನೆನೆದರು.
ರಾಜಕುಮಾರ ಚಿತ್ರದ ಸೆಟ್ನಲ್ಲಿ ನನಗೆ ಮೊದಲ ಬಾರಿ ಅವರ ಒಡನಾಟವಾಯಿತು. ಯುವರತ್ನ ಶೂಟಿಂಗ್ ವೇಳೆ ಈ ಅನುಬಂಧ ಇನ್ನಷ್ಟು ಗಟ್ಟಿಯಾಯಿತು. ಚಿತ್ರೀಕರಣದ ವೇಳೆ ಅವರರು ಅಭಿನಯಿಸುವುದನ್ನು ದೂರದಲ್ಲಿ ನಿಂತು ಗಮನಿಸುತ್ತಿದೆ. ಆಗ ಅವರು ಮಠ ಸರ್ ಇಲ್ಲಿ ಬನ್ನಿ ಅಂತ ಹತ್ತಿರ ಕರೆಯೋರು, ಹೇಗಿದ್ದೀರಿ ಎಂದು ಕುಶಲ ವಿಚಾರಿಸುತ್ತಿದ್ದರು. ಯುವರತ್ನ ಸಿನಿಮಾ ಶೂಟಿಂಗ್ ವೇಳೆ ನನ್ನ ಕಷ್ಟಗಳನ್ನು ಹೇಳಿಕೊಂಡಾಗ ಏನೂ ಹೆದರಬೇಡಿ, ನಾನಿದ್ದೀನಿ ಎಂದು ಧೈರ್ಯ ತುಂಬಿದ್ದರು. ಆದರೆ ಈಗ ಅವರೇ ಇಲ್ಲ ಎಂದು ಕಣ್ಣೀರಿಟ್ಟರು.