ಮಂಗಳೂರು: ಎನ್‌ಐಎ ಮತ್ತು ರಾಜ್ಯ ಪೊಲೀಸರ ದಾಳಿಯಲ್ಲಿ ಬಂಧಿತರಾಗಿರುವ 5 ಮಂದಿ ಪಿಎಫ್ಐ ಮುಖಂಡರನ್ನು 24 ಗಂಟೆಯೊಳಗೆ ಬಿಡುಗಡೆ ಮಾಡಬೇಕು. ಇಲ್ಲದಿದ್ದರೇ ಹೋರಾಟ ನಡೆಸಲಾಗುವುದು ಎಂದು ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಎಚ್ಚರಿಸಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇವತ್ತು ಮುಂಜಾನೆ 3.30ರ ಸುಮಾರಿಗೆ ಎನ್‌ಐಎ ಅತಿಕ್ರಮಣವಾಗಿ ದಾಳಿ ಮಾಡಿದೆ. ನೀವು ಯಾವ ಆಧಾರದಲ್ಲಿ ದಾಳಿ ಮಾಡಿದ್ದೀರಿ ಎಂದು ಕೇಳಿದಾಗ ಅವರು ತೋರಿಸಿದ ಕೋರ್ಟ್ ಆರ್ಡರ್ನಲ್ಲಿ ಪಿಎಫ್ಐ ಕಚೇರಿ ಎಂದು ಇತ್ತು. ಅದನ್ನು ಹೇಳಿದಾಗ ಒಂದೇ ಮಳಿಗೆಯಲ್ಲಿ ಇದ್ದ ಕಾರಣಕ್ಕೆ ಸಹಕಾರ ಕೊಡಬೇಕು ಎಂದು ಹೇಳಿದ್ದಾರೆ.
ಎನ್‌ಐಎ ಅವರು ಕಚೇರಿಯ ಕೆಳಗಿನ ಬೀಗ ತುಂಡರಿಸಿ ಗ್ಲಾಸ್ ಡೋರ್ ಒಡೆದು, ಜಿಲ್ಲಾಧ್ಯಕ್ಷರ ಟೇಬಲ್ನಲ್ಲಿದ್ದ ದಾಖಲೆಗಳನ್ನು ಎಳೆದು ಹಾಕಿ ಚೆಲ್ಲಾಪಿಲ್ಲಿ ಮಾಡಿದ್ದಾರೆ. ಕಚೇರಿಯ ಅಗ್ರಿಮೆಂಟ್ ಕಾಪಿ, ಎಸ್ಡಿಪಿಐ ಕಾರ್ಯಕ್ರಮದ ಫೈಲ್, ಫೋಟೋ, ಲ್ಯಾಪ್‌ಟಾಪ್, 2 ಹಾರ್ಡ್ ಡಿಸ್ಕ್, ಎರಡು ಬುಕ್ ಲೆಟ್ ತೆಗೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ನುರಿತ ವಕೀಲರ ಮೂಲಕ ಕಾನೂನು ಹೋರಾಟ ಮಾಡಲಾಗುವುದು ಎಂದರು.
ಜಿಲ್ಲೆಯಲ್ಲಿ ಪಿಎಫ್ಐನ 5 ಮಂದಿ ನಾಯಕರನ್ನು ಬಂಧಿಸಿದ್ದಾರೆ. 24 ಗಂಟೆಯೊಳಗೆ ಬಿಡುಗಡೆ ಮಾಡದಿದ್ದಲ್ಲಿ, ಸಂವಿಧಾನಾತ್ಮಕವಾಗಿ ಹೋರಾಟ ನಾಳೆಯಿಂದ ಮಾಡುತ್ತೇವೆ. ಎನ್‌ಐಎ ದಾಳಿ ರಾಜಕೀಯ ಪ್ರೇರಿತವಾಗಿದೆ. ಎಸ್ಡಿಪಿಐ ರಾಜಕೀಯವಾಗಿ ವೇಗವಾಗಿ ಬೆಳೆಯುತ್ತಿದೆ ಎಂಬ ನೆಲೆಯಲ್ಲಿ ಬಿಜೆಪಿ ಬಗ್ಗೆ ಸಾರ್ವಜನಿಕವಾಗಿ ಇರುವ ಕೆಟ್ಟ ಅಭಿಪ್ರಾಯದ ಬಗ್ಗೆ ಚರ್ಚೆ ನಡೆಯುತ್ತಿದೆ. ಇದನ್ನು ಮರೆಮಾಚಲು, ಬಿಜೆಪಿ ಕಾರ್ಯಕರ್ತರನ್ನು ಖುಷಿಪಡಿಸಲು ಈ ದಾಳಿ ನಡೆಸಿದ್ದಾರೆ ಎಂದು ಹೇಳಿದರು.
ಬಳಿಕ ಮಾತನಾಡಿದ ಎಸ್ಡಿಪಿಐ ಮುಖಂಡ ಜಲೀಲ್ ಕೃಷ್ಣಾಪುರ ಅವರು, ಗೃಹ ಸಚಿವರು ಎಸ್ಡಿಪಿಐ, ಪಿಎಫ್ಐ ನಿಷೇಧ ಮಾಡುವ ಬಗ್ಗೆ ಹೇಳಿಕೆ ನೀಡುವುದು ಸರಿಯಲ್ಲ. ಎಸ್ಡಿಪಿಐ ಚುನಾವಣಾ ಆಯೋಗದಲ್ಲಿ ನೋಂದಣಿಯಾದ ರಾಜಕೀಯ ಪಕ್ಷ. ಆ ರೀತಿ ಮಾಡಿದರೆ ಕಾನೂನು ಹೋರಾಟದ ಮೂಲಕ ಜಯಗಳಿಸುತ್ತೇವೆ ಎಂದರು.