ಮಂಗಳೂರು: ಗೋಡೆಗಳ ಮೇಲೆ ಉಗ್ರ ಬರಹ ಬರೆದಿರುವ ಪ್ರಕರಣದಲ್ಲಿ ಸಂಘ ಪರಿವಾರದ ಕೈವಾಡವಿದೆ ಎಂಬ ಶಂಕೆಯಿದೆ ಎಂದು ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಂಧಗಿಯಲ್ಲಿ ಪಾಕಿಸ್ತಾನದ ಧ್ವಜ, ಚಾಮರಾಜನಗರ ದೇವಸ್ಥಾನ ಮುಂದೆ ದನದ ರುಂಡ ಬಿಸಾಡುವ ಕೃತ್ಯ, ಶೃಂಗೇರಿ ಪ್ರತಿಮೆ ಮೇಲೆ ಧ್ವಜ ಪ್ರಕರಣದಲ್ಲಿ ಸಂಘ ಪರಿವಾರದವರು ಭಾಗಿಯಾಗಿದ್ದರು. ಮಂಗಳೂರಿನ ಅಲ್ಪಸಂಖ್ಯಾತ ಕಚೇರಿ ಮೇಲೆ, ಪಂಪ್ವೆಲ್ ಮಸೀದಿ ಮೇಲೆ ಕಲ್ಲೆಸೆತದಲ್ಲಿಯೂ ಅವರ ಪಾತ್ರವಿದೆ. ಹೀಗಿರುವಾಗ ಮಂಗಳೂರಿನ ಉಗ್ರ ಗೋಡೆ ಬರಹ ಪ್ರಕರಣದಲ್ಲಿಯೂ ಸಂಘ ಪರಿವಾರದ ಕೈವಾಡವಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದು ಹೇಳಿದರು. ಈ ಕೃತ್ಯಗಳನ್ನು ಜಿಲ್ಲೆಯಲ್ಲಿ ಶಾಂತಿ ಕದಡಲು, ಗಲಭೆ ಎಬ್ಬಿಸಲು ಕೋಮುವಾದಿ ಶಕ್ತಿಗಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸದಿರುವುದು ಯಕ್ಷ ಪ್ರಶ್ನೆಯಾಗಿದೆ. ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಉಳ್ಳಾಲವನ್ನು ಪಾಕಿಸ್ತಾನ ಎಂದು ಹೇಳಿ ದೇಶದ್ರೋಹಿ ಹೇಳಿಕೆ ನೀಡಿದ್ದರು.
ಅವರ ಮೇಲೆ ಎಸ್ಡಿಪಿಐ ದೂರು ನೀಡಿದರೂ ಪೊಲೀಸರು ಎಫ್ಐಆರ್ ದಾಖಲಿಸಿಲ್ಲ. ಸಂಘ ಪರಿವಾರದ ತಾಳಕ್ಕೆ ತಕ್ಕಂತೆ ಪೊಲೀಸ್ ಇಲಾಖೆ ಕುಣಿಯುತ್ತಿದೆ ಎಂಬ ಸಂಶಯ ಮೂಡುತ್ತಿದೆ. ಪೊಲೀಸ್ ಇಲಾಖೆ ಈ ಹಿಂದಿನ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳದಿರುವುದು ಇಂತಹ ಘಟನೆಗಳು ನಡೆಯಲು ಕಾರಣ. ಪೊಲೀಸ್ ಇಲಾಖೆ ಮತ್ತು ಸಂಘ ಪರಿವಾರದ ನಡುವೆ ಅಪವಿತ್ರ ಮೈತ್ರಿ ಇದೆ ಎಂಬ ಸಂಶಯ ಕಾಡುತ್ತಿದೆ ಎಂದು ಅವರು ಹೇಳಿದರು.