ಮಂಗಳೂರು: ತ್ಯಾಜ್ಯ ವಿಲೇವಾರಿಯನ್ನು ವೈಜ್ಞಾನಿಕವಾಗಿ ಮಾಡುವುದರಿಂದ ಜನರು ಉತ್ತಮ ಆರೋಗ್ಯ ಹೊಂದುವುದರ ಜೊತೆಗೆ ಪ್ರಾಣಿಗಳು ಸಹ ಉತ್ತಮ ಆರೋಗ್ಯ ಹೊಂದಲು ಸಹಕಾರಿಯಾಗುತ್ತದೆ. ಕಸ ಸಂಗ್ರಹದ ಪ್ರಾರಂಭಿಕ ಹಂತದಲ್ಲಿಯೇ ಹಸಿ ಹಾಗೂ ಒಣ ಕಸ ಬೇರ್ಪಡಿಸಿ ಹಸಿ ಕಸದಿಂದ ಗೊಬ್ಬರ ತಯಾರಿಕೆ, ಒಣ ಕಸದಿಂದ ಮರು ಉತ್ಪಾದನೆ ಮಾಡುವುದರಿಂದ ಗ್ರಾ.ಪಂ.ಗೆ ಲಾಭವಾಗಲಿದೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಜಿಪಂನ ನೇತ್ರಾವತಿ ಸಭಾಂಗಣದಲ್ಲಿ ದ.ಕ. ಜಿಪಂ ಸ್ವಚ್ಛ ಭಾರತ್ ಮಿಷನ್ (ಗ್ರಾ) ಅಡಿಯಲ್ಲಿ ಎಂ.ಆರ್.ಎಫ್ ಘಟಕ ಅನುಷ್ಠಾನಗೊಳಿಸುವ ಬಗ್ಗೆ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯದಲ್ಲಿಯೇ ಪ್ರಥಮವಾಗಿ ಬೆಂಗಳೂರಿನ ಗ್ರಾಮೀಣ ಭಾಗದ ಜಿಗಣಿಯಲ್ಲಿ ಒಣ ಕಸಗಳಾದ ಪ್ಲಾಸ್ಟಿಕ್, ರಟ್ಟು, ಗಾಜಿನ ಬಾಟಲ್‍ಗಳು ಸೇರಿದಂತೆ ಮತ್ತಿತರ ವಸ್ತುಗಳ ಮರು ಉತ್ಪಾದನೆ ಮಾಡುವುದರಿಂದ ಒಣ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡುವುದರ ಜೊತೆಗೆ ಆರ್ಥಿಕ ಲಾಭವನ್ನು ಸಹ ಪಡೆಯುವ ಕಾರ್ಯ ಉತ್ತಮವಾಗಿ ಆಗುತ್ತಿದೆ. ರಾಜ್ಯ ಸರ್ಕಾರ ಪೈಲೆಟ್ ಕಾರ್ಯಕ್ರಮವಾಗಿ ರಾಮನಗರ, ಉಡುಪಿ, ಬಳ್ಳಾರಿ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಎಂ.ಆರ್.ಎಫ್ ಘಟಕಗಳನ್ನು ಸ್ಥಾಪನೆ ಮಾಡಲು ಮಂಜೂರಾತಿ ನೀಡಲಾಗಿದೆ. ನಮ್ಮ ಜಿಲ್ಲೆಯಲ್ಲಿ ಶೀಘ್ರವಾಗಿ ಈ ಕಾರ್ಯವನ್ನು ಪ್ರಾರಂಭಿಸಬೇಕು ಎಂದು ತಿಳಿಸಿದರು.
ಸಂಸದ ನಳಿನ್ ಕುಮಾರ್ ಕಟೀಲು, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕುಮಾರ್, ಶಾಸಕ ಭರತ್ ವೈ. ಶೆಟ್ಟಿ, ರಾಮಕೃಷ್ಣ ಮಿಷನ್ನ ಏಕಗಮ್ಯಾನಂದ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.