ಬೆಳ್ತಂಗಡಿ(ದಕ್ಷಿಣ ಕನ್ನಡ): ಧರ್ಮದ ಮರ್ಮವನ್ನರಿತು ಬದುಕಿದರೆ ಮಾತ್ರ ಶಾಂತಿ, ಸಾಮರಸ್ಯದ ಜೀವನ ಸಾಧ್ಯ. ಎಲ್ಲ ಧರ್ಮಗಳ ಸಾರ ಬದುಕಿನಲ್ಲಿ ಶಾಂತಿ, ತೃಪ್ತಿ, ನೆಮ್ಮದಿ ಮತ್ತು ಸಂತೊಷ ನೀಡುವುದು ಆಗಿದೆ ಎಂದು ಖ್ಯಾತ ವಿದ್ವಾಂಸ ಗುರುರಾಜ ಕರ್ಜಗಿ ಹೇಳಿದರು.
ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ನಿಮಿತ್ತ 91ನೇ ಸರ್ವಧರ್ಮ ಸಮ್ಮೇಳನದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಎಲ್ಲೆಲ್ಲೂ ಧರ್ಮದ ಹೆಸರಿನಲ್ಲಿ ಹಿಂಸೆ ತಾಂಡವವಾಡುತ್ತಿದೆ. ಧರ್ಮದ ನೆಪದಲ್ಲಿ ಹಿಂಸೆ ಮತ್ತು ಭಯೋತ್ಪಾದನೆ ಸಲ್ಲದು. ಸರ್ವಧರ್ಮ ಸಮನ್ವಯದಿಂದ ಪವಿತ್ರತೆ, ಉದಾರತೆ ಮತ್ತು ಶಕ್ತಿವರ್ಧನೆಯೊಂದಿಗೆ ಸಾಮಾಜಿಕ ಸಾಮರಸ್ಯ ಶಾಂತಿ, ನೆಮ್ಮದಿ ಹಾಗೂ ಸೌಹಾರ್ದಯುತ ಜೀವನ ನಡೆಸಬಹುದು. ಧರ್ಮದ ಮರ್ಮವನ್ನರಿತು ಬದುಕಿನಲ್ಲಿ ಅನುಷ್ಠಾನ ಮಾಡಿದರೆ ಧರ್ಮದ ತತ್ವಗಳನ್ನೂ ರಕ್ಷಣೆ ಮಾಡಿದಂತಾಗುತ್ತದೆ ಎಂದು ಅಭಿಪ್ರಾಯ ತಿಳಿಸಿದರು.
ದೇವಸ್ಥಾನ, ವ್ಯಕ್ತಿಯ ಸಾಧನೆ ಮತ್ತು ಜನರ ಆಶಯ, ಅಪೇಕ್ಷೆಗಳ ಈಡೇರಿಕೆಯಿಂದ ಯಾವುದೇ ಕ್ಷೇತ್ರ ಪವಿತ್ರ ತೀರ್ಥಕ್ಷೇತ್ರವಾಗಿ ಬೆಳೆಯುತ್ತದೆ ಬೆಳಗುತ್ತದೆ. ಶ್ರೀ ಮಂಜುನಾಥ ಸ್ವಾಮಿ ಮತ್ತು ಧರ್ಮ ದೇವತೆಗಳ ಸಾನ್ನಿಧ್ಯ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಸಾಧನೆ ಮತ್ತು ಬಹುಮುಖಿ ಸಮಾಜ ಸೇವಾಕಾರ್ಯಗಳಿಂದಾಗಿ ಧರ್ಮಸ್ಥಳ ಇಂದು ಸರ್ವಧರ್ಮ ಸಮನ್ವಯ ಕೇಂದ್ರವಾಗಿ ಜಾಗತಿಕ ಮಟ್ಟದಲ್ಲಿ ಮಾನ್ಯತೆ ಹಾಗೂ ಗೌರವ ಹೊಂದಿದೆ ಎಂದು ಶ್ಲಾಘಿಸಿದರು.
ಮಾನವ ಕಲ್ಯಾಣವೇ ಧರ್ಮದ ಧ್ಯೇಯ: ವೀರೇಂದ್ರ ಹೆಗ್ಗಡೆ- ಧರ್ಮವು ಶಾಶ್ವತ ಮತ್ತು ನಿತ್ಯವಾದುದು. ಕಾಮ, ಭಯ, ಲೋಭ ಮತ್ತು ಬದುಕುವ ಉದ್ದೇಶ ಮತ್ತಿತರ ಯಾವುದೇ ಕಾರಣಕ್ಕಾಗಿಯೂ ಧರ್ಮವನ್ನು ತ್ಯಜಿಸಬಾರದು. ನಮ್ಮ ಸಾರ್ಥಕ ಬದುಕಿಗೆ ಬೆಳಕು ನೀಡಿ ದಾರಿ ತೋರಿಸುವ ಸಾಧನವನ್ನು “ಧರ್ಮ” ಎನ್ನತ್ತೇವೆ. ಮಾನವ ಜನಾಂಗದ ಕಲ್ಯಾಣವೇ ಧರ್ಮದ ಗುರಿಯಾಗಿದೆ ಎಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ವಿಶ್ವದಲ್ಲಿ ಅನೇಕ ಧರ್ಮಗಳಿದ್ದು ಅವುಗಳ ಆಚರಣೆ, ಕ್ರಿಯೆ ಹಾಗೂ ಸ್ವರೂಪದಲ್ಲಿ ವ್ಯತ್ಯಾಸ ಇದ್ದರೂ ಅಂತಿಮ ಗುರಿ ಮಾನವ ಜನಾಂಗದ ಕಲ್ಯಾಣವೇ ಆಗಿದೆ. ದೇಶದಲ್ಲಿ ಕಾಲಕಾಲಕ್ಕೆ ಧಾರ್ಮಿಕ, ಆರ್ಥಿಕ ಹಾಗೂ ಸಾಮಾಜಿಕ ಏರಪೇರುಗಳಾಗುತ್ತವೆ. ಇಂತಹ ಪರಿಸ್ಥಿತಿಗಳಲ್ಲಿ ಧರ್ಮವು ನಿರಂತರತೆ ಕಾಯ್ದುಕೊಳ್ಳುವುದೇ ಸವಾಲಾಗಿದೆ. ಆದರೆ, ಧರ್ಮಸ್ಥಳದಲ್ಲಿ ಬದ್ಧತೆಯಿಂದ, ಪ್ರಾಮಾಣಿಕವಾಗಿ ಕೋವಿಡ್ ಸಂದರ್ಭಗಳಲ್ಲಿ ಕೂಡಾ ಧರ್ಮದಲ್ಲಿ ನಿರಂತರತೆ ಕಾಯ್ದುಕೊಂಡು ಯಶಸ್ವಿಯಾಗಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.
ಧರ್ಮಸ್ಥಳದಲ್ಲಿ 1933ರಿಂದ ಪ್ರತಿವರ್ಷವೂ ಲಕ್ಷದೀಪೋತ್ಸವ ಸಂದರ್ಭದಲ್ಲಿ ಸರ್ವಧರ್ಮ ಸಮ್ಮೇಳನದ ಮೂಲಕ ಭಕ್ತರಿಗೆ ಉತ್ತಮ ಸಂದೇಶ ನೀಡಲಾಗುತ್ತಿದೆ. ಅಂತರಂಗದ ಶುದ್ಧತೆ ಹಾಗೂ ಪರಿಪಕ್ವತೆಯಿಂದ ಧರ್ಮದ ಆಚರಣೆಯೊಂದಿಗೆ ಬದುಕಿನಲ್ಲಿ ಎಲ್ಲರೂ ಒಳಿತನ್ನು ಕಾಣಬೇಕೆಂಬುದೇ ಸರ್ವಧರ್ಮ ಸಮ್ಮೇಳನದ 91ನೆ ಅಧಿವೇಶನದ ಆಶಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ತುಮಕೂರು ಸಿದ್ಧಗಂಗಾ ಮಠದ ಸಿದ್ಧಲಿಂಗ ಶ್ರೀಗಳು ಮಾತನಾಡಿ, ಅನ್ನದಾನ, ವಿದ್ಯಾದಾನ, ಔಷಧದಾನ ಮತ್ತು ಅಭಯದಾನ ಎಂಬ ಚತುರ್ವಿಧ ದಾನಗಳು ಧರ್ಮಸ್ಥಳದಲ್ಲಿ ನಿತ್ಯೋತ್ಸವವಾಗಿದ್ದು, ಬದುಕಿನಲ್ಲಿ ನೊಂದು ಬೆಂದು ಬಂದವರಿಗೆ ಇಲ್ಲಿ ಹೊಸಬೆಳಕು ಮೂಡಿಬರುತ್ತದೆ. ಪ್ರಾಚೀನ ಪರಂಪರೆ, ಆಧುನಿಕತೆ ಮತ್ತು ಆಧ್ಯಾತ್ಮಿಕತೆಯ ತ್ರಿವೇಣಿ ಸಂಗಮದೊಂದಿಗೆ ವೀರೇಂದ್ರ ಹೆಗ್ಗಡೆಯವರು ಅಮೋಘ ಸಾಧನೆ ಮಾಡಿದ್ದಾರೆ. ಸ್ವಧರ್ಮ ನಿಷ್ಠೆ ಮತ್ತು ಪರಧರ್ಮ ಸಹಿಷ್ಣುತೆಯೊಂದಿಗೆ ಮಾನವೀಯತೆ ಮೆರೆದರೆ ವಿಶ್ವಶಾಂತಿ ಸಾಧ್ಯವಾಗುತ್ತದೆ ಎಂದು ಉಪದೇಶ ನೀಡಿದರು.
ಆಧುನಿಕ ಭಾರತ- ಧರ್ಮ ಸಮನ್ವಯತೆ ಎಂಬ ವಿಷಯದ ಬಗ್ಗೆ ಡಾ.ಎಂ.ಆರ್. ವೆಂಕಟೇಶ್ ಉಪನ್ಯಾಸ ನೀಡಿದರು. ಪ್ರಾಚೀನ ಭಾರತ- ಧರ್ಮ ಸಮನ್ವಯತೆ ಎಂಬ ವಿಚಾರದಲ್ಲಿ ಡಾ. ವಿ.ಬಿ. ಆರತಿ ಮತ್ತು ಮಧ್ಯಕಾಲೀನ ಭಾರತ- ಧರ್ಮ ಸಮನ್ವಯತೆ ಎಂಬ ವಿಷಯದಲ್ಲಿ ಮಹಮ್ಮದ್ ಗೌಸ್ ರಶೀದ ಅಹ್ಮದ ಹವಾಲ್ದಾರ ಉಪನ್ಯಾಸ ನೀಡಿದರು.
ಎಸ್ ಆರ್. ವಿಘ್ನರಾಜ್ ಸಂಪಾದಿಸಿದ ಭೈರವೇಶ್ವರ ಪುರಾಣ ಗ್ರಂಥವನ್ನು ಸ್ವಾಮೀಜಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಹೇಮಾವತಿ ವಿ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್ ಮತ್ತು ಶ್ರದ್ಧಾ ಅಮಿತ್ ಉಪಸ್ಥಿತರಿದ್ದರು.
ಇದನ್ನೂಓದಿ:ಬಸವನಗುಡಿ ಕಡಲೆಕಾಯಿ ಪರಿಷೆ: ಜನರಲ್ಲಿ ಶುಚಿತ್ವದ ಜಾಗೃತಿ ಮೂಡಿಸುತ್ತಿವೆ ಸಂಘಟನೆಗಳು