ಪುತ್ತೂರು: ಕೋವಿಡ್-19 ಸಂಕಷ್ಟದ ಸಮಯವನ್ನು ಸದುಪಯೋಗ ಪಡಿಸಿಕೊಂಡ ವಿದ್ಯಾರ್ಥಿಯೋರ್ವ ಕೈ ಸ್ಪರ್ಶಿಸದೆ ಸ್ಯಾನಿಟೈಸರ್ ಬಳಕೆ ಮಾಡುವ ಯಂತ್ರವನ್ನು ಆವಿಷ್ಕರಿಸಿ ಪುತ್ತೂರು ಮಿನಿ ವಿಧಾನಸೌಧ ಹಾಗೂ ನಗರ ಪೊಲೀಸ್ ಠಾಣೆಗೆ ಕೊಡುಗೆಯಾಗಿ ನೀಡಿದ್ದಾನೆ.
ಪರ್ಲಡ್ಕ ನಿವಾಶಿ ದರ್ಬೆ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿ ನಿಹಾಲ್, ಲಾಕ್‌ಡೌನ್ ಸಂದರ್ಭದಲ್ಲಿ ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೈಯಿಂದ ಮುಟ್ಟದೆ ಸ್ಯಾನಿಟೈಸರ್ ಬಳಕೆ ಮಾಡುವ ಯಂತ್ರ ಆವಿಷ್ಕರಿಸಿದ್ದಾನೆ.
ಈ ಆವಿಷ್ಕಾರವನ್ನು ಶಾಸಕ ಸಂಜೀವ ಮಠಂದೂರು ಮಿನಿ ವಿಧಾನಸೌಧದಲ್ಲಿ ಉದ್ಘಾಟಿಸಿದ್ದು, ಪಿವಿಸಿ ಪೈಪ್ ಮೂಲಕ ಸ್ಯಾನಿಟೈಸರ್ ಪಡೆಯಲು ಈ ಸಾಧನವನ್ನು ಕಾಲಿನಿಂದ ಒತ್ತಬೇಕು. ಆಗ ಸ್ಯಾನಿಟೈಸರ್ ಕೈಗೆ ಸಿಂಪಡಣೆ ಆಗುತ್ತದೆ ಎಂದು ನಿಹಾಲ್ ಶಾಸಕರಿಗೆ ವಿವರಿಸಿದ್ದಾನೆ.
ನಿಹಾಲ್ ಒಂದು ಸಾಧನವನ್ನು ಪುತ್ತೂರು ನಗರ ಪೊಲೀಸ್ ಠಾಣೆಗೆ ನೀಡಿದ್ದಾನೆ. ಈ ಸಂದರ್ಭದಲ್ಲಿ ಸಹಾಯಕ ಕಮೀಷನರ್ ಡಾ. ಯತೀಶ್ ಉಳ್ಳಾಲ್, ತಹಶೀಲ್ದಾರ್ ರಮೇಶ್ ಬಾಬು ಟಿ., ಶಾಸಕರ ಆಪ್ತ ಸಹಾಯಕ ವಸಂತ ವೀರಮಂಗಲ, ಬಿಜೆಪಿ ಜಿಲ್ಲಾ ಮೋರ್ಚಾದ ಉಮರ್ ಮತ್ತಿತರರು ಉಪಸ್ಥಿತರಿದ್ದರು.