ಮಂಗಳೂರು : ರಾಜ್ಯ ಸರ್ಕಾರದ ಅವಸರದಿಂದ ವಿಧಾನ ಪರಿಷತ್ನಲ್ಲಿ ಉಪಸಭಾಪತಿಯವರನ್ನು ಸಭಾಪತಿ ಸ್ಥಾನದಲ್ಲಿ ಕೂರಿಸಲಾಗಿತ್ತು. ಆ ಬಳಿಕದ ಘಟನೆಯಿಂದ ಉಪಸಭಾಪತಿ ಧರ್ಮೇಗೌಡ ಅವರು ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಆದ್ದರಿಂದ ಅಂದಿನ ಘಟನೆಗೆ ಸರ್ಕಾರವೇ ನೇರ ಹೊಣೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಆರೋಪಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರಕ್ಕೆ ವಿಧಾನ ಪರಿಷತ್ ಕಲಾಪ ನಡೆಸಬೇಕೆಂಬ ತರಾತುರಿ ಏನಿತ್ತು?. ಅಲ್ಲದೆ ಉಪ ಸಭಾಪತಿಯವರನ್ನು ಬಲವಂತವಾಗಿ ಸಭಾಪತಿ ಸ್ಥಾನದಲ್ಲಿ ಕೂರಿಸಿದ್ದು ತಪ್ಪು. ಜೊತೆಗೆ ಸಭಾಪತಿಯವರನ್ನು ವಿಧಾನ ಪರಿಷತ್ ಒಳಗೆ ಬರಲು ಬಿಡದೆ ಬಾಗಿಲು ಮುಚ್ಚಿದ್ದು ತಪ್ಪು. ಇಂತಹ ಘಟನೆ ಇಡೀ ದೇಶದಲ್ಲಿ ಎಲ್ಲೂ ನಡೆದಿರಲಿಕ್ಕಿಲ್ಲ ಎಂದರು.
ಮುಂದಿನ 15 ದಿನಗಳಲ್ಲಿ ಕ್ಯಾಬಿನೆಟ್ ಸಭೆಯನ್ನು ಕರೆಯಬಹುದಿತ್ತು. ಸಭಾಪತಿಯವರು ಬರಬಾರದೆಂದು ಉಪ ಮುಖ್ಯಮಂತ್ರಿಯವರು ಸಭಾಪತಿ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಾರೆ. ಮುಂದೆ ನಡೆದ ಘಟನೆಗಳು ಆಗಬಾರದಿತ್ತು. ಆದರೆ, ನಡೆದು ಹೋಗಿದೆ. ಜನರು ನಮ್ಮನ್ನು ನೋಡುತ್ತಿದ್ದಾರೆ. ಆದ್ದರಿಂದ ನಮ್ಮನ್ನು ನಾವೇ ಸುಧಾರಿಸಿಕೊಂಡು ಹೋಗಬೇಕು ಎಂದು ಸಲೀಂ ಅಹ್ಮದ್ ಹೇಳಿದರು.
ಪಕ್ಷ ಸಂಘಟನೆಗೆ ಸಂಕಲ್ಪ ಸಮಾವೇಶ : ಪಕ್ಷ ಸಂಘಟನೆಗಾಗಿ ಜ.6 ರಿಂದ 15ರವರೆಗೆ ನಾಲ್ಕು ವಿಭಾಗದಲ್ಲಿ ಮುಖಂಡರ ಸಮಾವೇಶ ಕರೆಯಲಾಗಿದೆ. ಇದಕ್ಕೆ ಸಂಕಲ್ಪ ಸಮಾವೇಶ ಎಂದು ಹೆಸರಿಸಲಾಗಿದೆ. ಈ ಸಮಾವೇಶದಲ್ಲಿ ಪಕ್ಷ ಸಂಘಟನೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆಡಳಿತ ವೈಫಲ್ಯಗಳ ವಿರುದ್ಧ ಜನ ಜಾಗೃತಿ ಮಾಡಲಾಗುತ್ತದೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಈ ಸಂಕಲ್ಪ ಸಮಾವೇಶ ನಡೆಯಲಿದೆ ಎಂದರು.
ಇತ್ತೀಚೆಗೆ ನಡೆದ ಗ್ರಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅತೀ ಹೆಚ್ಚು ಮತ ನೀಡುವ ಮೂಲಕ ಜನ ಗೆಲ್ಲಿಸಿದ್ದಾರೆ. ನಮಗೆ ಈ ಬಗ್ಗೆ ತೃಪ್ತಿ ಇದ್ದು, ರಾಜ್ಯ ಸರ್ಕಾರದ ಭ್ರಷ್ಟಾಚಾರ, ಆಡಳಿತ ಗಮನಿಸಿ ಜನರು ನಮಗೆ ಮತ ನೀಡಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಯಾವ ರೀತಿ ಅಧಿಕಾರಕ್ಕೆ ಬಂದಿದೆ ಎಂದು ಎಲ್ಲರಿಗೂ ತಿಳಿದಿದೆ. ಆದರೆ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಸಲೀಂ ಅಹ್ಮದ್ ವಿಶ್ವಾಸ ವ್ಯಕ್ತಪಡಿಸಿದರು.