ಬಂಟ್ವಾಳ (ದಕ್ಷಿಣ ಕನ್ನಡ): ಭಾರತ ಉಳಿಸಲು ಹಿಂದೂಗಳು ಒಟ್ಟಾಗುವ ಅವಶ್ಯಕತೆ ಇದೆ. ನಾವು ಸಂಘಟನೆ ಅಡಿ ಒಂದೇ ಜಾತಿಗೆ ಸೇರಿದವರು. ನಮ್ಮಲ್ಲಿ ಒಗ್ಗಟ್ಟಿರಬೇಕು. ಹಿಂದೂಗಳು ರಾಷ್ಟ್ರಭಕ್ತಿಯ ಕಿಚ್ಚು ಹೊಂದಿರಬೇಕು ಎಂದು ಮಧ್ಯಪ್ರದೇಶದ ಸಾಧ್ವಿ ದೇವಿ ಸರಸ್ವತಿ ಹೇಳಿದರು.
ವಿಶ್ವ ಹಿಂದೂ ಪರಿಷದ್ 60ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ಸಂದರ್ಭ ಬಜರಂಗದಳದಿಂದ ಶೌರ್ಯ ಜಾಗರಣಾ ಯಾತ್ರೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಬಸ್ತಿಪಡ್ಪು ಮೈದಾನದಲ್ಲಿ ನಡೆದ ಜಾಗೃತ ಹಿಂದೂ ಸಮಾವೇಶದಲ್ಲಿ ಭಾನುವಾರ ಅವರು ದಿಕ್ಸೂಚಿ ಭಾಷಣ ಮಾಡಿದರು.
ಔರಂಗಜೇಬ್, ಟಿಪ್ಪು ಸುಲ್ತಾನ್ರ ಕಟೌಟ್ ಹಾಕುವುದರ ವಿರುದ್ಧ ಮಾತನಾಡಿದ ಅವರು, ನಾನು ಮುಸಲ್ಮಾನ ವಿರೋಧಿಯಲ್ಲ. ಆದರೆ ಹಿಂದೂಗಳ ವಿರೋಧಿಯಾಗಿರುವ ಸನಾತನ ಧರ್ಮದ ವಿರುದ್ಧ ಮಾತನಾಡುವವರನ್ನು ವಿರೋಧಿಸುತ್ತೇನೆ ಎಂದು ಹೇಳಿದರು.
"ಸನಾತನದ ಕುರಿತು ಮಾತನಾಡುವವರು ಅಳಿದು ಹೋಗುವುದು ನಿಶ್ಚಿತ. ಹಿಂದೂಗಳಲ್ಲಿ ಒಗ್ಗಟ್ಟು ಇರಬೇಕು. ನಾವು ಸಂಘಟನೆ ಅಡಿ ಒಂದೇ ಜಾತಿಗೆ ಸೇರಿದವರು. ನಮ್ಮಲ್ಲಿ ಒಗ್ಗಟ್ಟಿರಬೇಕು. ಹನುಮಂತನಂತೆ ಮುಷ್ಠಿ ಎತ್ತಬೇಕು. ಅವಶ್ಯಕತೆ ಬಿದ್ದಾಗ ಮಾತೆಯರು ಶಸ್ತ್ರಧಾರಣೆ ಮಾಡಬೇಕು. ಹಿಂದೂಗಳು ರಾಷ್ಟ್ರಭಕ್ತಿಯ ಕಿಚ್ಚು ಹೊಂದಿರಬೇಕು" ಎಂದರು.
ಆರ್ಎಸ್ಎಸ್ನ ಜ್ಯೇಷ್ಠ ಪ್ರಚಾರಕ ಸು.ರಾಮಣ್ಣ ಮಾತನಾಡಿ, "ವಿ.ಹಿಂ.ಪ, ಭಜರಂಗದಳದ ಕಾರ್ಯಕರ್ತರು ವಿರಮಿಸದೆ ಕೆಲಸ ಮಾಡಬೇಕು. ಮಲಗಿದವರನ್ನು ಎಬ್ಬಿಸುವ ಕಾರ್ಯ ಮಾಡಬೇಕು. ಶೌರ್ಯ ವಿಜೃಂಭಿಸಿದರೆ, ಕ್ರೌರ್ಯ ತನ್ನಷ್ಟಕ್ಕೆ ನಾಶವಾಗುತ್ತದೆ" ಎಂದು ಹೇಳಿದರು.
ಶೌರ್ಯ ಜಾಗರಣಾ ರಥಯಾತ್ರೆ ಸ್ವಾಗತ ಸಮಿತಿ ರಘು ಎಲ್.ಶೆಟ್ಟಿ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ತಾಲೂಕಿನ ಸಂತರಾದ ಒಡಿಯೂರು ಗುರುದೇವಾನಂದ ಸ್ವಾಮೀಜಿ, ಶ್ರೀಧಾಮ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು ಕಣಿಯೂರು ಮಹಾಬಲ ಸ್ವಾಮೀಜಿ ವಿ.ಹಿಂ.ಪ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷ ಡಾ.ಎಂ.ಬಿ.ಪುರಾಣಿಕ್ ಮತ್ತು ವಿಹಿಂಪ ಪುತ್ತೂರು ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ ಭಾಗವಹಿಸಿದ್ದರು. ವಿಶ್ವ ಹಿಂದೂ ಪರಿಷತ್ ಬಂಟ್ವಾಳ ಅಧ್ಯಕ್ಷ ಹಾಗೂ ರಥಯಾತ್ರೆ ಸ್ವಾಗತ ಸಮಿತಿ ಕಾರ್ಯದರ್ಶಿ ಪ್ರಸಾದ್ ಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ಬಿ.ಭಾಸ್ಕರ ರಾವ್ ಪ್ರೇರಣಾ ಗೀತೆ ಹಾಡಿದರು. ನವೀನ್ ಕುಲಾಲ್ ಕಾರ್ಯಕ್ರಮ ನಿರ್ವಹಿಸಿದರು. ಸಚಿನ್ ಮೆಲ್ಕಾರ್ ವಂದಿಸಿದರು.
ವಿಶ್ವ ಹಿಂದೂ ಪರಿಷತ್ ಸ್ಥಾಪನೆಯಾಗಿ 60ನೇ ವರ್ಷಕ್ಕೆ ಕಾಲಿಡುತ್ತಿರುವ ಸಂಭ್ರಮದಲ್ಲಿ ಶೌರ್ಯ ಜಾಗರಣಾ ರಥಯಾತ್ರೆ ಬಂಟ್ವಾಳ ತಾಲೂಕಿಗೆ ಭಾನುವಾರ ಆಗಮಿಸಿದ್ದು, ಬಿ.ಸಿ.ರೋಡ್ ಸಮೀಪ ಬಸ್ತಿಪಡ್ಪುವಿನಲ್ಲಿ ಜಾಗೃತ ಹಿಂದೂ ಸಮಾವೇಶ ನಡೆಯಿತು. ಇದಕ್ಕೂ ಮುನ್ನ ಮಾಣಿ ಜಂಕ್ಷನ್ ಗೆ ಯಾತ್ರೆ ಪ್ರವೇಶಿಸಿ, ಅಲ್ಲಿ ಸಂಘ ಪರಿವಾರದ ಪ್ರಮುಖರು ಪುಷ್ಪಾರ್ಚನೆ ಮೂಲಕ ರಥವನ್ನು ಸ್ವಾಗತಿಸಿದರು.
ಬಳಿಕ ಕಲ್ಲಡ್ಕ ಮಾರ್ಗವಾಗಿ ರಥ ಬಿ.ಸಿ.ರೋಡಿನ ಕೈಕಂಬದ ಪೊಳಲಿ ದ್ವಾರಕ್ಕೆ ತಲುಪಿತು. ಅಲ್ಲಿ ತೆಂಗಿನಕಾಯಿ ಒಡೆದು ರಥಕ್ಕೆ ಗೌರವಪೂರ್ಣವಾಗಿ ಸ್ವಾಗತಿಸಲಾಯಿತು. ಈ ಸಂದರ್ಭ ರಥಕ್ಕೆ ಶ್ರೀಧಾಮ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ, ಕಣಿಯೂರು ಮಹಾಬಲ ಸ್ವಾಮೀಜಿ, ವಿಹಿಂಪ ಕರ್ನಾಟಕ ದ.ಪ್ರಾಂತ ಕಾರ್ಯಾಧ್ಯಕ್ಷ ಡಾ. ಎಂ.ಬಿ.ಪುರಾಣಿಕ್, ಆರ್ಎಸ್ಎಸ್ ಹಿರಿಯ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್, ಶಾಸಕ ರಾಜೇಶ್ ನಾಯ್ಕ್, ವಿಶ್ವ ಹಿಂದೂ ಪರಿಷತ್ ಬಂಟ್ವಾಳ ಅಧ್ಯಕ್ಷ ಹಾಗೂ ರಥಯಾತ್ರೆ ಸ್ವಾಗತ ಸಮಿತಿ ಕಾರ್ಯದರ್ಶಿ ಪ್ರಸಾದ್ ಕುಮಾರ್ ಸಹಿತ ವಿಶ್ವ ಹಿಂದೂ ಪರಿಷತ್, ಭಜರಂಗಳದ ಪ್ರಮುಖರು ನಮಿಸಿ ಸ್ವಾಗತಿಸಿದರು. ಬಳಿಕ ಅಲ್ಲಿಂದ ಬಸ್ತಿಪಡ್ಪುವಿನವರೆಗೆ ಕಾರ್ಯಕರ್ತರು ರಥದೊಂದಿಗೆ ಹೆಜ್ಜೆ ಹಾಕಿದರು. ಈ ಸಂದರ್ಭ ನಾಸಿಕ್ ಬ್ಯಾಂಡ್, ಭಜನಾ ತಂಡಗಳು ಸಾಥ್ ನೀಡಿದವು.
ಮುಂಜಾಗ್ರತಾ ಕ್ರಮ: ಬಂಟ್ವಾಳ, ಬಿ.ಸಿ.ರೋಡ್ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಬಾರ್, ವೈನ್ ಶಾಪ್, ಮದ್ಯದಂಗಡಿಗಳನ್ನು ಬಂದ್ ಮಾಡಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಿ.ಸಿ.ರೋಡ್, ಕೈಕಂಬ, ಬಂಟ್ವಾಳ ಪೇಟೆ, ಬೈಪಾಸ್, ಲೊರೆಟ್ಟೊ, ನರಿಕೊಂಬು, ಮಾರ್ನಬೈಲ, ಕಲ್ಲಡ್ಕ ಮತ್ತು ಕರಿಂಗಾನ ಪ್ರದೇಶಗಳಲ್ಲಿ ಮದ್ಯ ಮಾರಾಟ ಬಂದ್ ಆಗಿತ್ತು. ವಾಹನ ದಟ್ಟಣೆ ಆಗದಂತೆ ಅಲ್ಲಲ್ಲಿ ಆಯಕಟ್ಟಿನ ಜಾಗಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು.
ಇದನ್ನೂ ಓದಿ: 'ನಮ್ಮ ದೇಹದಲ್ಲಿ ಸನಾತನ ಹಿಂದೂ ಧರ್ಮದ ರಕ್ತ ಹರಿಯುತ್ತಿದೆ, ನಮ್ಮನ್ನು ಯಾರೂ ಅಲ್ಲಾಡಿಸಲು ಸಾಧ್ಯವಿಲ್ಲ': ಬೊಮ್ಮಾಯಿ