ಪುತ್ತೂರು: ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವತಿಯಿಂದ ಪ್ರತೀ ಜಿಲ್ಲೆಯ ಬೇಡಿಕೆಗಳನ್ನು ಗಮನಿಸಿ ಗಾಯತ್ರೀ ಭವನ (ಸಮುದಾಯ ಭವನ)ಗಳನ್ನು ನಿರ್ಮಿಸಲಾಗುತ್ತಿದ್ದು ಕರ್ನಾಟಕದ ಪ್ರಥಮ ಗಾಯತ್ರೀ ಭವನ ರೂ. 1.50 ಕೋಟಿ ವೆಚ್ಚದಲ್ಲಿ ಪುತ್ತೂರು ತಾಲೂಕಿನಲ್ಲಿ ನಿರ್ಮಿಸಲಾಗುವುದು ಎಂದು ಮಂಡಳಿಯ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ತಿಳಿಸಿದರು.
ಶುಕ್ರವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬ್ರಾಹ್ಮಣರ ಕ್ಷೇಮಾಭಿವೃದ್ಧಿಗಾಗಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಿದ್ದು ಪ್ರತೀ ವರ್ಷ ಪೂರಕ ಅನುದಾನಗಳನ್ನು ಮಂಜೂರು ಮಾಡುತ್ತಿದ್ದಾರೆ. ರಾಜ್ಯ ಸರ್ಕಾರವು ವಿವಿಧ ಯೋಜನೆಗಳಿಗೆ ಈಗಾಗಲೇ ರೂ. 20 ಕೋಟಿ ಹಾಗೂ ಬಂಡವಾಳ ವೆಚ್ಚಕ್ಕೆ ರೂ. 5 ಕೋಟಿ ಮಂಜೂರು ಮಾಡಿದೆ. ಶಾಸಕ ಸಂಜೀವ ಮಠಂದೂರು ಗಾಯತ್ರೀ ಭವನ ನಿರ್ಮಾಣಕ್ಕೆ ಸರ್ಕಾರಿ ನಿವೇಶನವನ್ನು ಒದಗಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಮೂಲಕ ರಾಜ್ಯದಲ್ಲಿ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದ ಅಭಿವೃದ್ಧಿಗೆ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಸ್ವ ಉದ್ಯೋಗ, ಮೂಲ ಸೌಕರ್ಯದ ಅಭಿವೃದ್ಧಿಗಳನ್ನೊಳಗೊಂಡ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು. ಬ್ರಾಹ್ಮಣ ಸಮುದಾಯಕ್ಕಾಗಿ ಶೈಕ್ಷಣಿಕ ವಿಚಾರದಲ್ಲಿ ಶಿಷ್ಯ ವೇತನ ಯೋಜನೆಯನ್ನು ರೂಪಿಸಲಾಗಿದ್ದು ಕೃಷಿ ಕ್ಷೇತ್ರವು ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆ ಸವಲತ್ತುಗಳನ್ನು ನೀಡಲಾಗುತ್ತದೆ. ಕೇಂದ್ರ ಸರ್ಕಾರ ಹಿಂದುಳಿದವರಿಗಾಗಿ ನೀಡುವ ಶೇ. 10ರ ಮೀಸಲಾತಿಯನ್ನು ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೂ ನೀಡುವಂತೆ ರಾಜ್ಯ ಸರ್ಕಾರಕ್ಕೆ ಶಾಸಕರ ಮೂಲಕ ಮನವಿ ಸಲ್ಲಿಸಲಾಗಿದೆ ಎಂದರು.
ಮೃತರ ಆತ್ಮ ಸದ್ಗತಿಗಾಗಿ ಅಪರಕ್ರಿಯೆಗಳನ್ನು ನಡೆಸಲು ವ್ಯವಸ್ಥಿತ ಕಟ್ಟಡಗಳನ್ನು ದಾನಿಗಳ ನೆರವಿನಿಂದ ಮಂಡಳಿಯು ನಿರ್ಮಾಣ ಮಾಡುತ್ತಿದ್ದು. ಗಯಾಪದ ಕ್ಷೇತ್ರ ದಕ್ಷಿಣ ಕಾಶಿ ಉಪ್ಪಿನಂಗಡಿಯಲ್ಲಿ ಇಂತಹ ಕಟ್ಟಡ ವ್ಯವಸ್ಥೆಯನ್ನು ಮಾಡುವಂತೆ ಈಗಾಗಲೇ ಶಾಸಕ ಸಂಜೀವ ಮಠಂದೂರು ನನ್ನ ಗಮನಕ್ಕೆ ತಂದಿದ್ದು, ತ್ವರಿತವಾಗಿ ಈ ಯೋಜನೆಯ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಸಂಜೀವ ಮಠಂದೂರು, ಮಂಗಳೂರು ವಿಭಾಗ ಬಿಜೆಪಿ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲ ಬಿಜೆಪಿ ಅಧ್ಯಕ್ಷ ಪಿ.ಜಿ. ಜಗನ್ನಿವಾಸ್ ರಾವ್ ಉಪಸ್ಥಿತರಿದ್ದರು.