ಸುಬ್ರಹ್ಮಣ್ಯ(ದಕ್ಷಿಣ ಕನ್ನಡ): ಕರ್ನಾಟಕ ಸರ್ಕಾರ ಬಹುತೇಕ ತಾಲೂಕುಗಳಲ್ಲಿ ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನವನ(ಟ್ರೀ ಪಾರ್ಕ್) ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ನದಿ ಪಕ್ಕದಲ್ಲಿ ನಿರ್ಮಿಸಲಾದ ಟ್ರೀಪಾರ್ಕ್ ಇಂದಿನಿಂದ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಂಡಿದೆ.
ಕುಕ್ಕೆ ಸುಬ್ರಹ್ಮಣ್ಯದ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನವನ ಸುಮಾರು 1.20 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಂಡಿದ್ದು, ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಸಚಿವ ಎಸ್.ಅಂಗಾರ ಅವರ ಸಭಾಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ವೃಕ್ಷೋದ್ಯಾನವನವನ್ನು ಲೋಕಾರ್ಪಣೆ ಮಾಡಲಾಯಿತು.
ವೃಕ್ಷೋದ್ಯಾನವನದ ವಿಶೇಷತೆ:
ಈ ವೃಕ್ಷೋದ್ಯಾನವನದಲ್ಲಿ ಅಂದವಾದ ಮುಖ್ಯದ್ವಾರ ನಿರ್ಮಿಸಲಾಗಿದ್ದು, ಮೊದಲ ನೋಟದಲ್ಲೇ ನೋಡುಗರನ್ನು ಸೆಳೆಯುವಂತಿದೆ. ಟ್ರೀ ಪಾರ್ಕ್‌ನಲ್ಲಿ ವಾಯುವಿಹಾರಕ್ಕಾಗಿ ದಾರಿ ನಿರ್ಮಾಣ ಮಾಡಲಾಗಿದೆ. ಪ್ರವೇಶ ಶುಲ್ಕ ಸಂಗ್ರಹದ ಟಿಕೆಟ್ ಕೌಂಟರ್ ಹಾಗೂ ಮಾಹಿತಿ ಕೇಂದ್ರ ಇದೆ.
ಮಕ್ಕಳಿಗೆ ಆಟವಾಡಲು ತಿರುಗುವ ಚಕ್ರ, ತೂಗುಯ್ಯಾಲೆ, ಕುದುರೆ ಮೇಲೆ ಕುಳಿತು ಆಡುವ ಆಟಿಕೆ ಸೇರಿದಂತೆ ಅನೇಕ ಆಟಿಕೆಗಳ ಪರಿಕರಗಳನ್ನು ಅಳವಡಿಸಲಾಗಿದೆ. ವನದೊಳಗೆ ಬರುವ ಹಿರಿಯರು, ಕಿರಿಯರಿಗೆ ವಿಶ್ರಾಂತಿ ಪಡೆಯಲು ಕಲ್ಲಿನ ಸುಂದರ ಕೆತ್ತನೆಯ ಬೆಂಚುಗಳು ಸೇರಿದಂತೆ ಹಲವಾರು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಸರ್ಕಾರ ನಿಗದಿಪಡಿಸಿದ ಪ್ರವೇಶ ಶುಲ್ಕವನ್ನು ನೀಡಿ ಸಾರ್ವಜನಿಕರು ವೃಕ್ಷೋದ್ಯಾನವನಕ್ಕೆ ಪ್ರವೇಶ ಪಡೆಯಬಹುದಾಗಿದೆ.