ಕಡಬ(ದಕ್ಷಿಣ ಕನ್ನಡ): ಸರ್ಕಾರಕ್ಕೆ ಸ್ಪಷ್ಟವಾದ ನಿರ್ಧಾರಗಳು ಇರಬೇಕು. ಆದರೆ ನಮ್ಮ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲಿ ಈಗ ಯಾವುದೇ ಸ್ಪಷ್ಟತೆಗಳು ಇಲ್ಲ ಎಂದು ಸುಳ್ಯ ಶಾಸಕ ಎಸ್. ಅಂಗಾರ ಹೇಳಿದರು.
ಕಡಬ ತಾಲೂಕಿನ ವಾಳ್ಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ನೂತನ ಅಂಗನವಾಡಿ ಕಟ್ಟಡದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಸ್ಪಷ್ಟವಾದ ನಿರ್ಧಾರಗಳು ಸರ್ಕಾರಕ್ಕೆ ಇರಬೇಕು. ಅದು ಶಿಕ್ಷಣವಾಗಿರಲಿ, ಕೈಗಾರಿಕೆ ಹಾಗೂ ಅಭಿವೃದ್ಧಿ ವಿಚಾರದಲ್ಲಿ ಇರಬಹುದು. ಯಾವುದೇ ಕ್ಷೇತ್ರದಲ್ಲೂ ಸ್ಪಷ್ಟತೆ ಇಲ್ಲದಂತಹ ಸ್ಥಿತಿ ಇಂದು ಇದೆ ಎಂದು ಹೇಳಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಸಕ ಎಸ್. ಅಂಗಾರ ಅವರನ್ನು ಗ್ರಾಮಸ್ಥರ ಪರವಾಗಿ ಶಾಲು ಹೊದಿಸಿ, ಫಲಪುಷ್ಪಗಳನ್ನು ನೀಡಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಪಿ.ಪಿ.ವರ್ಗೀಸ್, ತಾಲೂಕು ಪಂಚಾಯತ್ ಸದಸ್ಯ ಗಣೇಶ್ ಕೈಕುರೆ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.