ಸುಳ್ಯ: ತಾಲೂಕಿನ ಬೆಳ್ಳಾರೆಯ ರಬ್ಬರ್ ಉತ್ಪಾದಕರ ಸಂಘದ ಅಧ್ಯಕ್ಷ ಹಾಗೂ ಉದ್ಯಮಿ ರಾಜೇಶ್ ಗುಂಡಿಗದ್ದೆ (47) ಎಂಬುವರು ಸೆ. 4ರಿಂದ ಮನೆಗೆ ಬಾರದೇ ನಾಪತ್ತೆಯಾಗಿರುವ ಬಗ್ಗೆ ಅವರ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ. ನಾಲ್ಕು ದಿನ ಕಳೆದರೂ ಉದ್ಯಮಿ ಪತ್ತೆಯಾಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಸುಳ್ಯ ಪೇಟೆಗೆ ಹೋಗುವುದಾಗಿ ಹೇಳಿ ಹೋದವರು ಮನೆಗೆ ಬಾರದೇ, ಫೋನ್ ಸಂಪರ್ಕಕ್ಕೂ ಸಿಗದೆ ಕಾಣೆಯಾಗಿದ್ದಾರೆ ಎಂದು ಸೆ. 5ರಂದು ರಾಜೇಶ್ ಪತ್ನಿ ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ರಬ್ಬರ್ ಉತ್ಪಾದಕರ ಸಂಘದ ಅಧ್ಯಕ್ಷ ಹಾಗೂ ಕೃಷಿಕರಾಗಿರುವ ರಾಜೇಶ್, ತಮ್ಮ ಇಕೋ ಸ್ಪೋರ್ಟ್ಸ್ ಕಾರು (KA 21 P 6758)ನಲ್ಲಿ ಸೆ.4ರಂದು ಮನೆಯಿಂದ ತೆರಳಿದ್ದಾರೆ.
ಸುಳ್ಯಕ್ಕೆ ಆಗಮಿಸಿದ ಅವರು ಬಳಿಕ ಕಲ್ಲುಗುಂಡಿ ಪೇಟೆಯಾಗಿ ಸಂಪಾಜೆ ಕಡೆಗೆ ಪ್ರಯಾಣಿಸಿರುವ ಬಗ್ಗೆ ಹಾಗೂ ಬಂದಡ್ಕ ಮೊಬೈಲ್ ಟವರ್ನಲ್ಲಿ ಅವರ ಮೊಬೈಲ್ ಸ್ವಿಚ್ಡ್ ಆಫ್ ಆಗಿದ್ದಾಗಿ ಹೇಳಲಾಗುತ್ತಿದೆ.
ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿರುವ ರಬ್ಬರ್ ಉತ್ಪಾದಕರ ಸಂಘಕ್ಕೆ ರಾಜೇಶ್ ಅಧ್ಯಕ್ಷರಾಗಿದ್ದು, ಈ ಸಂಘದಲ್ಲಿ ಬೆಳ್ಳಾರೆಯ ಸುತ್ತಮುತ್ತಲಿನ ಗ್ರಾಮಗಳ ರಬ್ಬರು ಬೆಳೆಗಾರರಿಂದ ರಬ್ಬರ್ ಹಾಲನ್ನು ಖರೀದಿಸಿ ಕೆಲ ದಿನ ಬಿಟ್ಟು ಹಣ ನೀಡುವ ವ್ಯವಸ್ಥೆ ಇತ್ತು. ಇತ್ತೀಚಿನ ವರ್ಷಗಳಲ್ಲಿ ಸಂಘವು ನಷ್ಟದಲ್ಲಿದ್ದು, ರಬ್ಬರ್ ಹಾಲು ಹಾಕಿದ ಬೆಳೆಗಾರರಿಗೆ ಕೋಟಿಗೂ ಮೀರಿ ಹಣ ಕೊಡಲು ಬಾಕಿ ಇದೆ. ಮಾತ್ರವಲ್ಲದೇ ಸಂಘದ ಹೆಸರಲ್ಲಿ ಪಡೆದ ಸಾಲ, ಭೂಮಿ ಖರೀದಿ ಮತ್ತು ಅಭಿವೃದ್ಧಿಗೆ ಸೇರಿದಂತೆ ವೈಯಕ್ತಿಕವಾಗಿಯೂ ರಾಜೇಶ್ ಹಲವೆಡೆ ಸಾಲ ಮಾಡಿದ್ದರು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ರಾಜೇಶ್ಗೆ ಹಣ ಪಾವತಿಸಲು ಜನರಿಂದ ಒತ್ತಡ ಬರುತ್ತಿತ್ತು ಎಂಬ ಮಾತುಗಳು ಕೇಳಿ ಬರುತ್ತಿದ್ದು, ಈ ಕಾರಣಗಳಿಗಾಗಿ ರಾಜೇಶ್ ನಾಪತ್ತೆಯಾಗಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಇದೀಗ ಸಂಘಕ್ಕೆ ರಬ್ಬರ್ ಹಾಲು ಸುರಿದ ಹಲವು ಕೃಷಿಕರಿಗೆ, ಸಾಲಕೊಟ್ಟ ಹಣಕಾಸು ಸಂಸ್ಥೆಗಳಿಗೂ ಭೀತಿ ಎದುರಾಗಿದೆ. ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮನೆದೇವರ ಜಾತ್ರೆಗೆ ಹೊರಟವರ ಕ್ರೂಸರ್ಗೆ ಬಸ್ ಡಿಕ್ಕಿ: ಬಾಲಕ ಸಾವು, ಐವರಿಗೆ ಗಾಯ