ಮಂಗಳೂರು (ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ಕೇರಳ ಮತ್ತು ಕರ್ನಾಟಕದ ಗಡಿಯಲ್ಲಿ ಕೇರಳದಿಂದ ಬರುವವರಿಗೆ ಆರ್ಟಿ-ಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ. ರಾಜ್ಯ ಸರಕಾರದ ನಿರ್ದೇಶನದಂತೆ ದಕ್ಷಿಣ ಕನ್ನಡ ಮತ್ತು ಕೇರಳ ಗಡಿ ಸಂಪರ್ಕಿಸುವ ತಲಪಾಡಿ, ಜಾಲ್ಸೂರು, ನೆಟ್ಟನಿಗೆ ಮುಡ್ನೂರು ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಚೆಕ್ ಪೋಸ್ಟ್ ತೆರೆಯಲಾಗಿದ್ದು ಇಲ್ಲಿ ಕೋವಿಡ್ ನೆಗೆಟಿವ್ ರಿಪೋರ್ಟ್ ತೋರಿಸಬೇಕಿದೆ.
ಮಂಗಳೂರಿನ ತಲಪಾಡಿಯಲ್ಲಿ ಇಂದು ಬೆಳಿಗ್ಗೆ 10 ಗಂಟೆಯ ಬಳಿಕ ತಪಾಸಣೆ ಆರಂಭಿಸಲಾಗಿದ್ದು, ಆರ್ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಇದ್ದವರಿಗೆ ಮಂಗಳೂರು ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ.ಆರ್ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಇಲ್ಲದವರಿಗೆ ಸ್ಥಳದಲ್ಲಿಯೇ ಉಚಿತ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದ್ದು, ಎರಡು ದಿನದಲ್ಲಿ ರಿಪೋರ್ಟ್ ಅವರ ಕೈಸೇರಲಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿರುವ ನಡುವೆ ಕೇರಳದಿಂದ ಬರುವ ಪ್ರಯಾಣಿಕರಿಂದ ಪ್ರಕರಣಗಳು ಹೆಚ್ಚಳವಾಗಬಾರದೆಂಬ ನೆಲೆಯಲ್ಲಿ ಜಿಲ್ಲಾಡಳಿತ ಈ ನಿರ್ಧಾರ ಕೈಗೊಂಡಿದೆ.