ಉಳ್ಳಾಲ (ದಕ್ಷಿಣಕನ್ನಡ): ಕಾರು ಚಾಲಕನೊಬ್ಬ ಹಠಾತ್ ಬ್ರೇಕ್ ಹಾಕಿದ ಪರಿಣಾಮ ಹಿಂಬದಿಯಲ್ಲಿದ್ದ ಲಾರಿ ಗುದ್ದಿ, ಅದರ ಹಿಂಭಾಗಕ್ಕೆ ವ್ಯಾಗನಾರ್ ಕಾರು ಗುದ್ದಿ, ಅದಕ್ಕೆ ಬಸ್ ಡಿಕ್ಕಿಯಾದ ಪರಿಣಾಮ ಸರಣಿ ಅಪಘಾತ ಸಂಭವಿಸಿ ಹಲವರು ಸಣ್ಣಪುಟ್ಟ ಗಾಯಗಳಿಂದ ಪಾರಾದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಜೆಪ್ಪುವಿನ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ತೊಕ್ಕೊಟ್ಟು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಸಿಯಾಝ್ ಕಾರು ಚಾಲಕ ಹಠಾತ್ ಬ್ರೇಕ್ ಹಾಕಿದ್ದಾರೆ. ಪರಿಣಾಮ ಹಿಂಬದಿಯಲ್ಲಿದ್ದ ಲಾರಿ ಸಿಯಾಝ್ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಅದೇ ವೇಳೆ ಲಾರಿ ಹಿಂಭಾಗದಲ್ಲಿದ್ದ ವ್ಯಾಗನಾರ್ ಕಾರು ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆಯುವ ಸಂದರ್ಭವೇ ಅದರ ಹಿಂಭಾಗದಲ್ಲಿದ್ದ ಕೇರಳ ಸಾರಿಗೆ ಬಸ್ ವ್ಯಾಗನಾರ್ಗೆ ಡಿಕ್ಕಿ ಹೊಡೆದಿದೆ.
ಘಟನೆಯಲ್ಲಿ ಲಾರಿ ಹಾಗೂ ಬಸ್ ನಡುವೆ ಸಿಲುಕಿದ ವ್ಯಾಗನಾರ್ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿ ಅಪ್ಪಚ್ಚಿಯಾಗಿದೆ. ಉಳಿದ ವಾಹನಗಳ ಹಿಂಭಾಗಕ್ಕೆ ಹಾನಿಯಾಗಿದೆ. ವ್ಯಾಗನಾರ್ ಕಾರಿನಲ್ಲಿ ಚಾಲಕ ಮಾತ್ರ ಇದ್ದು, ಆತ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾನೆ. ಎಲ್ಲ ವಾಹನಗಳಲ್ಲಿದ್ದ ಐದು ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಯ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಚಿಕ್ಕಮಗಳೂರಲ್ಲಿ ಅಪಘಾತ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ನಲ್ಲಿ ಮಳೆ ಜೊತೆ ದಟ್ಟವಾದ ಮಂಜು ಆವರಿಸಿದ್ದರಿಂದ ಇಂದು ಎರಡು ಅಪಘಾತಗಳು ಸಂಭವಿಸಿವೆ. ಮಂಗಳೂರಿಗೆ ಹೋಗುತ್ತಿದ್ದ, ಬೊಲೆರೋ ವಾಹನವೊಂದು ದಾರಿ ಕಾಣದೇ ರಸ್ತೆಯ ಒಂದು ಬದಿಯ ಪ್ರಪಾತಕ್ಕೆ ಅಡ್ಡಲಾಗಿ ಕಟ್ಟಿದ್ದ ತಡೆಗೋಡೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮತ್ತೊಂದೆಡೆ ಅಣ್ಣಪ್ಪಸ್ವಾಮಿ ದೇಗುಲದ ಸಮೀಪ ದಟ್ಟ ಮಂಜು ಆವರಿಸಿದ್ದರಿಂದ ಹುಬ್ಬಳ್ಳಿಯಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಸರ್ಕಾರಿ ಬಸ್ ಮತ್ತು ಧರ್ಮಸ್ಥಳದಿಂದ ಧಾರವಾಡಕ್ಕೆ ಹೊರಟಿದ್ದ ಕಾರಿನ ನಡುವೆ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ರಸ್ತೆ ಪಕ್ಕದ ತಡೆಗೋಡೆ ಕುಸಿದು ಬಿದ್ದಿದೆ. ಕಾರು ಹಾಗೂ ಬಸ್ನಲ್ಲಿದ್ದ ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತ ಸಂಭವಿಸಿದ ರಸ್ತೆಯಲ್ಲಿ ಸಾವಿರಾರು ಅಡಿ ಪ್ರಪಾತವಿದ್ದು, ಕೂದಲೆಳೆ ಅಂತರದಿಂದ ಬಸ್ ಹಾಗೂ ಕಾರು ಎರಡು ಪ್ರಪಾತದಿಂದ ಪಾರಾಗಿವೆ.
ಇದನ್ನೂ ಓದಿ: ಆಟೋ - ಲಾರಿ ಡಿಕ್ಕಿ: ಐವರು ಅಡುಗೆ ಸಿಬ್ಬಂದಿ ದುರ್ಮರಣ