ಮಂಗಳೂರು: ಶಾಲಾ-ವಿದ್ಯಾರ್ಥಿಗಳಿಗೆ ಶಾಸಕರೇ ಮುಂದೆ ನಿಂತು ರೈಫಲ್ ತರಬೇತಿ ನೀಡಿರುವುದು ರಾಜ್ಯ ಸರ್ಕಾರದ ತಾಲಿಬಾನ್ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು ವಿಧಾನಸಭೆಯ ಪ್ರತಿಪಕ್ಷದ ಉಪನಾಯಕ ಯು.ಟಿ. ಖಾದರ್ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳೂರಿನಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಮಾನ್ಯತೆಯಿರುವ ಎನ್ ಸಿಸಿಯಲ್ಲೂ ರೈಫಲ್ ತರಬೇತಿ ಕೊಡಲಾಗುತ್ತದೆ. ಅದರಲ್ಲಿ ದೇಶಪ್ರೇಮದ ಉದ್ದೇಶವಿದೆ. ಯಾರಿಗೆ ಬೇಕಾದರೂ ರೈಫಲ್ ತರಬೇತಿ ಕೊಡಬಹುದೇ?. ಈ ತರಬೇತಿಗೆ ಜಿಲ್ಲಾಧಿಕಾರಿ, ಪೊಲೀಸ್ ಇಲಾಖೆಯ ಅನುಮತಿ ಇದೆಯೇ?. ಈ ಬಗ್ಗೆ ಗೃಹ ಸಚಿವರು ಹಾಗೂ ಶಿಕ್ಷಣ ಸಚಿವರು ರಾಜ್ಯದ ಜನತೆಗೆ ಉತ್ತರಿಸಬೇಕು ಎಂದು ಒತ್ತಾಯಿಸಿದರು.
ಮತ ನೀಡಿದವರ ಕೆಲಸ ಮಾಡಲಿ: ಮುಸ್ಲಿಂ ಮತ ಬೇಡ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಖಾದರ್, ಪರಿಪಕ್ವವಲ್ಲದ ಇಂತಹ ಮಾತಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಇದು ಚೀಪ್ ಪಾಲಿಟಿಕ್ಸ್. ಬೆಳ್ತಂಗಡಿಯ ಜನತೆಯೇ ಇದಕ್ಕೆ ತಕ್ಕ ಉತ್ತರ ಕೊಡುತ್ತಾರೆ ಎಂದು ಖಾದರ್ ಹೇಳಿದರು.
ಬೆಳ್ತಂಗಡಿಯ ಎಂಡೋಸಲ್ಫಾನ್ ಪೀಡಿತರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಪ್ರತಿಭಟನೆ ನಡೆಸಿದರು. ಇದೀಗ ಎಂಡೋಸಲ್ಫಾನ್ ಪೀಡಿತರನ್ನು ಕೇಳುವವರು ಇಲ್ಲದಂತಾಗಿದೆ. ಹರೀಶ್ ಪೂಂಜಾ ಅವರಿಗೆ ವೋಟ್ ಕೊಟ್ಟವರ ಕೆಲಸವನ್ನಾದರೂ ಅವರು ಮಾಡಲಿ ಎಂದು ಕಿಡಿಕಾರಿದರು.
ಮಳಲಿ ಮಸೀದಿಯಲ್ಲಿ ದೇವಾಲಯದ ಶೈಲಿ ಪತ್ತೆಯಾಗಿರುವ ವಿವಾದದ ಬಗ್ಗೆ ಮಾತನಾಡಿ, 300-400 ವರ್ಷಗಳಿಂದ ಅಲ್ಲಿ ಮಸೀದಿಯೇ ಇರುವುದು. ಇದು ಅಲ್ಲಿನ ಸ್ಥಳೀಯರಿಗೂ ಗೊತ್ತಿದೆ. ಹೊರಗಿನ ಕೆಲವರಿಗೆ ಅದು ಮಸೀದಿಯಲ್ಲ ದೇವಾಲಯ ಎಂಬ ಸಂಶಯ ಬಂದಿದ್ದು, ಅವರು ಜಿಲ್ಲಾಧಿಕಾರಿಗಳಿಗೆ ದೂರು ಅರ್ಜಿ ನೀಡಿದ್ದಾರೆ. ಜಿಲ್ಲಾಧಿಕಾರಿಯವರು ಈ ಬಗ್ಗೆ ತಕ್ಷಣ ನ್ಯಾಯ ಕೊಡುವ ಕೆಲಸ ಮಾಡಬೇಕು. ಜಿಲ್ಲಾಧಿಕಾರಿ ಯಾರದೋ ಒತ್ತಡದಿಂದ ನಿರ್ಧಾರ ಪ್ರಕಟ ಮಾಡಲು ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ಯು ಟಿ ಖಾದರ್ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬಂದೂಕು ತರಬೇತಿ ಸಮರ್ಥಿಸಿಕೊಂಡ ಕೆ ಜಿ ಬೋಪಯ್ಯ