ಮಂಗಳೂರು: ವಿವಾದದ ಬಳಿಕ ಬಿಪಿಎಲ್ಗೆ ಮಾನದಂಡ ರೂಪಿಸಲಾಗುವುದು ಎಂದು ಸರ್ಕಾರ ಹೇಳಿದೆ. ಈ ಹಳೆ ಮಾನದಂಡವನ್ನು ನಾನು ಆಹಾರ ಸಚಿವನಾಗಿದ್ದಾಗ ರೂಪಿಸಿದ್ದು, ಐದು ವರ್ಷಗಳು ಕಳೆದಿದೆ. ಇದರ ಆದಾಯಮಿತಿಯನ್ನು ಬದಲಾವಣೆ ಮಾಡಿ ರೂಪಿಸಲಿ ಎಂದು ಮಾಜಿ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ಈಟಿವಿ ಭಾರತ ಜೊತೆಗೆ ಮಾತನಾಡಿದ ಅವರು, ಉಮೇಶ್ ಕತ್ತಿಯವರು ಟಿವಿ, ಫ್ರಿಡ್ಜ್, ಬೈಕ್ ಇದ್ದವರಿಗೆ ಬಿಪಿಎಲ್ ಕಾರ್ಡ್ ಇಲ್ಲ ಎಂದು ನೀಡಿದ ಹೇಳಿಕೆಗೆ ಆಕ್ರೋಶ ವ್ಯಕ್ತವಾದ ಬಳಿಕ ಅದನ್ನು ಹಿಂತೆಗೆದುಕೊಂಡಿದ್ದಾರೆ. ಟಿವಿ, ಫ್ರಿಡ್ಜ್, ಬೈಕ್ಗಳನ್ನು ಕಂತಿನಲ್ಲಿ ನೀಡಿ ಅವರಿಗೆ ಬಿಪಿಎಲ್ ಕಾರ್ಡ್ ನಿರಾಕರಿಸುತ್ತಿದ್ದಾರೆ. ಇದು ಸರಿಯಲ್ಲ. ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಬಿಪಿಎಲ್ ಕಾರ್ಡ್ ಪಡೆಯಲು 15 ಮಾನದಂಡಗಳು ಬೇಕಾಗಿತ್ತು. ಕಲರ್ ಟಿವಿ, ಫ್ರಿಡ್ಜ್, ಬೈಕ್ ಮೊದಲಾದ ಮಾನದಂಡಗಳನ್ನು ರೂಪಿಸಲಾಗಿತ್ತು.
ಆದರೆ, ನಾನು ಆಹಾರ ಸಚಿವನಾದ ಬಳಿಕ ಆಗಿನ ಸಿದ್ದರಾಮಯ್ಯ ಅವರ ಜೊತೆಗೆ ಚರ್ಚಿಸಿ ಈ ಮಾನದಂಡಗಳನ್ನು ರದ್ದುಪಡಿಸಿ ಗ್ರಾಮಾಂತರ ಭಾಗಗಳಿಗೆ ಮೂರು ನಿಯಮ, ನಗರ ಭಾಗಗಳಿಗೆ ನಾಲ್ಕು ನಿಯಮ ಅಳವಡಿಸಿದ್ದೆವು. ಗ್ರಾಮಾಂತರ ಭಾಗಗಳಿಗೆ ಆದಾಯ ಮಿತಿ 1.2 ಲಕ್ಷ, 7 ಹೆಕ್ಟೇರ್ವರೆಗಿನ ಗದ್ದೆ, 11 ಹೆಕ್ಟೇರ್ವರೆಗಿನ ಒಣಭೂಮಿ, ಖಾಸಗಿ ವಾಹನ ಇಲ್ಲದಿರುವುದು ಮಾನದಂಡವಾದರೆ. ನಗರ ಭಾಗಗಳಲ್ಲಿ 10 ಸಾವಿರ ಚದರಡಿಯ ಮನೆ ಇಲ್ಲದಿರುವುದು ಮಾನದಂಡವಾಗಿತ್ತು ಎಂದರು.
ಓದಿ: 2012ರ ಬಿಪಿಎಲ್ ಕಾರ್ಡ್ ಮಾನದಂಡಗಳು ಮುಂದುವರಿಯುತ್ತವೆ; ಸಚಿವ ಉಮೇಶ ಕತ್ತಿ
2016ರಲ್ಲಿ ನಾನು ರೂಪಿಸಿದ ಈ ಮಾನದಂಡವನ್ನು ಮುಂದುವರಿಸಲು ಸರ್ಕಾರ ಸಮ್ಮತಿಸಿದೆ. ಆದರೆ ಆಗ 1.2 ಲಕ್ಷ ಇದ್ದ ಆದಾಯ ಮಿತಿಯನ್ನು ಈಗ ಹೆಚ್ಚಿಸಬೇಕು. ಕನಿಷ್ಠ 1.5 ಲಕ್ಷವಾದರೂ ಮಾಡಬೇಕು. ಇಲ್ಲದಿದ್ದರೆ ಹಲವು ಮಂದಿ ಕಡಿಮೆ ವೇತನ ಹೊಂದಿರುವವರು ಬಿಪಿಎಲ್ ಪಡೆಯಲು ಅನಾನುಕೂಲವಾಗಲಿದೆ. ಆದ ಕಾರಣ ಆದಾಯ ಮಿತಿ ಹೆಚ್ಚಿಸಿ ಮಾನದಂಡ ರೂಪಿಸಬೇಕು ಎಂದು ಒತ್ತಾಯಿಸಿದರು.