ಮಂಗಳೂರು (ದ.ಕ): ಜಿಲ್ಲೆಯ 9 ಆಸ್ಪತ್ರೆಗಳ ಆರೋಗ್ಯ ಮಿತ್ರರ ದೂರವಾಣಿ ಸಂಖ್ಯೆ ನಕಲಿಯಾಗಿದ್ದು, ಈ ಬಗ್ಗೆ ಪತ್ರಿಕೆಗಳಲ್ಲಿ ಹೇಳಿಕೆ ಕೊಟ್ಟವರ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಿ. ಇಲ್ಲವೇ ಈ ಬಗ್ಗೆ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಿ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜಾ ಆಗ್ರಹಿಸಿದ್ದಾರೆ.
ಆಯುಷ್ಮಾನ್ ಭಾರತ ಯೋಜನೆಯಡಿಯಲ್ಲಿ ಕೋವಿಡ್ ಸೋಂಕಿತರಿಗೆ ಉಚಿತ ಚಿಕಿತ್ಸೆಯ ಮಾಹಿತಿ ನೀಡಲೆಂದು ದ.ಕ.ಜಿಲ್ಲೆಯ 9 ಆಸ್ಪತ್ರೆಗಳಲ್ಲಿ ಆರೋಗ್ಯ ಮಿತ್ರರ ನೇಮಕ ಮಾಡಲಾಗಿದೆ. ಆದ್ರೆ ಅವರ ದೂರವಾಣಿ ಸಂಖ್ಯೆಗಳ ಸಹಿತ ಎಲ್ಲಾ ಮಾಹಿತಿಗಳು ನಿನ್ನೆಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿತ್ತು. ಆದರೆ ಈ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿದರೆ, ಅದು ಯಾವುದೂ ಅಸಲಿ ದೂರವಾಣಿ ಸಂಖ್ಯೆಗಳಲ್ಲ ಎಂದು ತಿಳಿದು ಬಂದಿದೆ ಅಂತಾ ಅವರು ಹೇಳಿದ್ದಾರೆ.
ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವ ಆರೋಗ್ಯಮಿತ್ರರ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿದ್ದಲ್ಲಿ ಸಂಬಂಧವೇ ಇಲ್ಲದವರು ಕರೆ ಸ್ವೀಕರಿಸುತ್ತಾರೆ. ಈ ಬಗ್ಗೆ ಮಂಗಳೂರಿನ ಶಾಸಕರು, ಉಸ್ತುವಾರಿ ಸಚಿವರು, ಸಂಸದರು, ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿಯವರು ಪರಿಶೀಲನೆ ನಡೆಸಲಿ. ಸುಳ್ಳು ಪ್ರಕಟಣೆ ನೀಡಿ ಸಂಕಷ್ಟದಲ್ಲಿರುವ ರೋಗಿಗಳಿಗೆ ಮತ್ತಷ್ಟು ಕಷ್ಟ ನೀಡಲಾಗುತ್ತಿದೆ ಎಂದರು.
ಇದರ ಬಗ್ಗೆ ನೀವೆಲ್ಲರೂ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಅಲ್ಲದೆ ದಿನನಿತ್ಯವೂ ಎಲ್ಲಾ ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ ಎಷ್ಟು ಉಚಿತ ಬೆಡ್ ಹಾಗೂ ವೆಂಟಿಲೇಟರ್ಗಳು ಖಾಲಿ ಇದೆ ಎಂಬುದರ ಬಗ್ಗೆ ಮಾಹಿತಿ ನೀಡಬೇಕು. ಇಲ್ಲದಿದ್ದಲ್ಲಿ ನಿಮ್ಮ ವೈಫಲ್ಯಗಳನ್ನು ಜನತೆಗೆ ತಿಳಿಸಲು ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಎಂದು ಐವನ್ ಡಿಸೋಜಾ ಎಚ್ಚರಿಕೆ ನೀಡಿದರು.