ಮಂಗಳೂರು: ದೇಶದೆಲ್ಲೆಡೆ ಕೋವಿಡ್ ವೇಗವಾಗಿ ಹರಡುತ್ತಿದ್ದು, ತೀವ್ರ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಎರಡನೇ ಅಲೆಯಲ್ಲಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಬರುವವರ ಸಂಖ್ಯೆ ಅಗಾಧ ಪ್ರಮಾಣದಲ್ಲಿ ಇರುವುದರಿಂದ ಅವರ ಆರೈಕೆ ಮಾಡಲು ಕೆಲವೆಡೆ ನರ್ಸ್ಗಳ ಕೊರತೆ ಕಾಣಿಸಿದೆ. ಹೌದು, ಹಲವೆಡೆ ಬೆಡ್, ಆಕ್ಸಿಜನ್, ವೆಂಟಿಲೇಟರ್.. ಹೀಗೆ ಹಲವು ಕೊರತೆಗಳ ನಡುವೆ ವೈದ್ಯಕೀಯ ಸಿಬ್ಬಂದಿ ಕೊರತೆಯೂ ಇದೆ. ರೋಗಿಗಳ ಪ್ರಮಾಣ ಹೆಚ್ಚಾಗಿರುವುದು ಸೇರಿದಂತೆ ವೈದ್ಯರು, ನರ್ಸ್, ಸಿಬ್ಬಂದಿಗೆ ಸೋಂಕು ತಗುಲಿರುವುದೂ ಕೂಡ ಒಂದು ಕಾರಣ.
ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನರ್ಸ್ಗಳ ಕೊರತೆಯಾಗದಂತೆ ಎಚ್ಚರಿಕೆಯಿಂದ ನೋಡಿಕೊಳ್ಳಲಾಗುತ್ತಿದೆ ಎಂದು ದ.ಕ ಜಿಲ್ಲಾ ಆರೋಗ್ಯಾಧಿಕಾರಿ ಕಿಶೋರ್ ಕುಮಾರ್ ಮಾಹಿತಿ ನೀಡಿದ್ದಾರೆ.
ಕೋವಿಡ್ ಪರಿಣಾಮ ಆಸ್ಪತ್ರೆಗಳಲ್ಲಿ ನರ್ಸ್ಗಳಿಗೆ ಬಿಡುವಿಲ್ಲದ ಕೆಲಸವಿದೆ. ಒತ್ತಡವೂ ಹೆಚ್ಚಾಗಿದೆ. ರೋಗಿಗಳನ್ನು ಜಾಗರೂಕತೆಯಿಂದ ನೋಡಿಕೊಳ್ಳಬೇಕಾದ ನರ್ಸ್ಗಳ ಕೊರತೆ ಕೆಲವೆಡೆ ಕಾಣಿಸಿಕೊಳ್ಳುತ್ತಿದೆ. ಮಂಗಳೂರಿನಲ್ಲಿ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಕೊರತೆ ಎದುರಾಗಿಲ್ಲವಾದರೂ ಸರ್ಕಾರಿ ಆಸ್ಪತ್ರೆಗೆ ಮತ್ತಷ್ಟು ನರ್ಸ್ಗಳ ಅವಶ್ಯಕತೆ ಇರುವುದರಿಂದ ನೇಮಕ ಪ್ರಕ್ರಿಯೆ ನಡೆಯುತ್ತಿದೆ.
ಮಂಗಳೂರಿನಲ್ಲಿ 07 ಖಾಸಗಿ ಮೆಡಿಕಲ್ ಕಾಲೇಜುಗಳಿವೆ. ಈ ಏಳು ಮೆಡಿಕಲ್ ಕಾಲೇಜು ಆಸ್ಪತ್ರೆಗಳು ತಮ್ಮದೇ ಆದ ನರ್ಸಿಂಗ್ ಕಾಲೇಜು ಹೊಂದಿದೆ. ಆಸ್ಪತ್ರೆಯ ನರ್ಸ್ಗಳ ಜತೆಗೆ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸಹ ಇರುವುದರಿಂದ ಇಲ್ಲಿ ನರ್ಸ್ಗಳ ಕೊರತೆ ಎದುರಾಗುವುದಿಲ್ಲ.
ಇದನ್ನೂ ಓದಿ: ಮುದ್ದೇಬಿಹಾಳ: ಹಸಿದವರಿಗೆ ಆಹಾರ ವಿತರಿಸುತ್ತಿದೆ ಈ ಮಸೀದಿ!
ಇನ್ನು, ಮಂಗಳೂರಿನ ಕೋವಿಡ್ ಆಸ್ಪತ್ರೆಯಾಗಿರುವ ಜಿಲ್ಲಾ ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ಕೂಡ ನರ್ಸ್ಗಳ ಕೊರತೆ ಇಲ್ಲ. ಆಸ್ಪತ್ರೆಯ ವಾರ್ಡ್ ಮತ್ತು ಐಸಿಯುವಿನಲ್ಲಿ ನರ್ಸ್ಗಳ ಸಂಖ್ಯೆ ಅವಶ್ಯಕತೆಗೆ ತಕ್ಕಂತೆ ಇದೆ. ಆದರೂ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ನರ್ಸ್ ಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.
ಈ ಆಸ್ಪತ್ರೆಯಲ್ಲಿ ಇನ್ನಷ್ಟು ಸಂಖ್ಯೆಯ ನರ್ಸ್ಗಳ ಅವಶ್ಯಕತೆ ಕಂಡುಬಂದರೆ ಕೆಎಂಸಿ ಆಸ್ಪತ್ರೆಯಿಂದ ಅವರನ್ನು ಕರೆಸಿಕೊಳ್ಳುವ ವ್ಯವಸ್ಥೆ ಇದೆ. ತಾಲೂಕು ಆಸ್ಪತ್ರೆಗಳಿಗೂ ನರ್ಸ್ಗಳ ನೇಮಕಾತಿ ಮಾಡಿ ಸಮಸ್ಯೆ ಬಾರದಂತೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಹಲವು ಖಾಸಗಿ ನರ್ಸಿಂಗ್ ಕಾಲೇಜುಗಳು ಮಂಗಳೂರಿನಲ್ಲಿ ಇರುವುದರಿಂದ ಅವಶ್ಯಕತೆ ಬಿದ್ದರೆ ಅವರನ್ನು ಕರೆಸಿಕೊಳ್ಳುವ ಸಾಧ್ಯತೆ ಇದೆ.