ಮಂಗಳೂರು : ದ.ಕ ಜಿಲ್ಲೆಯಲ್ಲಿ ಕಳೆದ ಎರಡು ವಾರಗಳಿಂದೀಚೆಗೆ ಕೋವಿಡ್-19 ಸೋಂಕು ಹರಡುವ ಪ್ರಕರಣ ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಾಳೆ ರಾತ್ರಿ 8 ಗಂಟೆಯಿಂದ ಜುಲೈ 23ರ ಬೆಳಗ್ಗೆ 5 ಗಂಟೆಯವರೆಗೆ ಸಂಪೂರ್ಣ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆ ಲಾಕ್ಡೌನ್ನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ಅದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ದ.ಕ ಜಿಲ್ಲಾಧಿಕಾರಿ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗ್ಗೆ 8 ರಿಂದ 11ರವರೆಗೆ ದಿನಸಿ ಅಂಗಡಿಗಳು, ಹಾಲು, ತರಕಾರಿ, ಹಣ್ಣು, ಮೀನು, ಮಾಂಸಗಳ ಮಾರುಕಟ್ಟೆಗಳು ತೆರೆದಿರುತ್ತವೆ. ಈ ಸಮಯದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಆದರೆ, ಬಾರ್,ವೈನ್ ಶಾಪ್ಗಳು,ಮಾಲ್, ವಾಣಿಜ್ಯ ಮಳಿಗೆಗಳು ಸಂಪೂರ್ಣ ಬಂದ್ ಆಗಲಿದೆ. ಅಲ್ಲದೆ ಕಂಟೇನ್ಮೆಂಟ್ ಝೋನ್ಗಳಲ್ಲಿ ಸಂಪೂರ್ಣ ಬಂದ್ ಇರಲಿದೆ.
ಸಾರ್ವಜನಿಕ, ಖಾಸಗಿ ಸಾರಿಗೆ ಸಂಚಾರಗಳು ಸಂಪೂರ್ಣ ಬಂದ್ ಇರಲಿದ್ದು, ಹೆದ್ದಾರಿಗಳಲ್ಲಿ ಸರಕು ಸಾಗಾಣಿಕೆಯ ವಾಹನ ಸಂಚಾರಗಳಿಗೆ ಅವಕಾಶ ನೀಡಲಾಗುತ್ತದೆ. ಅದೇ ರೀತಿ ಆರೋಗ್ಯ ಸೇವೆ ಸೇರಿದಂತೆ ತುರ್ತು ಸೇವೆಗಳು, ಮೆಡಿಕಲ್ಗಳು ಎಂದಿನಂತೆ ತೆರೆದಿರುತ್ತವೆ. ಅಲ್ಲದೆ ಅಗತ್ಯ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಲಿದೆ.
ಇನ್ನು, ಕೃಷಿಗೆ ಸಂಬಂಧಿತ ಚಟುವಟಿಕೆಗಳಿಗೂ ವಿನಾಯಿತಿ ಇರಲಿದೆ ಎಂದು ದ.ಕ.ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.