ಮಂಗಳೂರು: ದಲಿತ ಮಹಿಳೆಗೆ ಮೀನು ಮಾರಾಟ ಮಾಡಲು ಅವಕಾಶ ನಿರಾಕರಿಸುತ್ತಿದ್ದು, ಈ ಬಗ್ಗೆ ದೂರು ನೀಡಿದರೂ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಈ ಕುರಿತು ಮಾತನಾಡಿದ ಅಂಬೇಡ್ಕರ್ ಯುವಸೇನೆ ಕೆರೆಕಾಡು ಮುಖಂಡ ಲೋಕೇಶ್ ಪಡುಬಿದ್ರೆ, ಕಿನ್ನಿಗೋಳಿಯಲ್ಲಿ ಕಳೆದ 70 ವರ್ಷಗಳಿಂದ ದಲಿತ ಮಹಿಳೆಯೊಬ್ಬರು ಒಣಮೀನು ಮತ್ತು ಚಿಪ್ಪು ಮಾರಾಟ ಮಾಡುತ್ತಿದ್ದರು. ಆ ದಲಿತ ಮಹಿಳೆಯ ಮಗಳು ಕಿನ್ನಿಗೋಳಿ ಮೀನು ಮಾರುಕಟ್ಟೆಗೆ ಮೀನು ಮಾರಾಟ ಮಾಡಲು ಬಂದಾಗ ಕಿರುಕುಳ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಎರಡು ಬಾರಿ ಪ್ರಕರಣ ದಾಖಲಾದರೂ ಮುಚ್ಚಳಿಕೆ ಬರೆಸಿ ಪ್ರಕರಣ ಇತ್ಯರ್ಥಗೊಳಿಸಲಾಗಿತ್ತು. ಆದರೆ ಇದೀಗ ಮಹಿಳೆಗೆ ಮೀನು ಮಾರಾಟಕ್ಕೆ ಅವಕಾಶ ನೀಡಲಾಗುತ್ತಿಲ್ಲ. ದಲಿತ ಮಹಿಳೆ ಮೀನು ಮಾರಾಟಕ್ಕೆ ಮಾರುಕಟ್ಟೆಗೆ ಬಂದರೆ ನಿಂದಿಸುವುದು, ಶಟರ್ ಹಾಕುವುದು ಮಾಡಲಾಗುತ್ತಿದೆ. ಈ ಬಗ್ಗೆ ದೂರು ನೀಡಿದರೂ ಮೂಲ್ಕಿ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ಆರೋಪಿಸಿದರು.