ಮಂಗಳೂರು: ಕ್ಷೀಣವಾಗಿ ಆರಂಭಗೊಂಡಿದ್ದ ಮುಂಗಾರು ಮಳೆ ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿರುಸಿನಿಂದ ಸುರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕರಾವಳಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಮಳೆಯಿಂದ ಒಂದು ಜೀವಹಾನಿ ಸಂಭವಿಸಿದೆ. ಮಂಗಳೂರಿನ ಕಿನ್ನಿಗೋಳಿಯಲ್ಲಿ ವಿದ್ಯುತ್ ಕಂಬ ಸಮೇತ ಬಿದ್ದ ಮಾವಿನ ಮರದ ಗೆಲ್ಲು ಕಡಿಯುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶವಾಗಿ ಮಾಧವ ಆಚಾರ್ಯ(55) ಎಂಬವರು ಮೃತಪಟ್ಟಿದ್ದರು. 6 ಮನೆಗಳಿಗೆ ಪೂರ್ಣ ಹಾನಿ ಮತ್ತು 8 ಮನೆಗಳಿಗೆ ಭಾಗಶಃ ಹಾನಿಯಾಗಿದೆ ಎಂದು ದಕ್ಷಿಣ ಜಿಲ್ಲಾಡಳಿತ ಮಾಹಿತಿ ನೀಡಿದೆ.
ಜಿಲ್ಲೆಯಲ್ಲಿ ಹರಿಯುವ ನೇತ್ರಾವತಿ ನದಿ ಬಂಟ್ವಾಳದಲ್ಲಿ 3 ಮೀಟರ್ (ಅಪಾಯದ ಮಟ್ಟ 8.5 ಮೀಟರ್), ಉಪ್ಪಿನಂಗಡಿಯಲ್ಲಿ 24.4 ಮೀಟರ್(ಅಪಾಯದ ಮಟ್ಟ 31.5 ಮೀಟರ್), ಕುಮಾರಧಾರ ನದಿ ಉಪ್ಪಿನಂಗಡಿಯಲ್ಲಿ12 ಮೀಟರ್ (ಅಪಾಯದ ಮಟ್ಟ 26.5 ಮೀಟರ್) ಗುಂಡ್ಯ ನದಿ 3.3 ಮೀಟರ್(ಅಪಾಯದ ಮಟ್ಟ 5 ಮೀಟರ್) ತುಂಬಿದೆ.
ಭಾರಿ ಮಳೆಯಿಂದಾಗುವ ಅಪಾಯದ ಸಂದರ್ಭದಲ್ಲಿ ಕಾರ್ಯಾಚರಣೆಗೆ ಎಸ್‌ಡಿಆರ್‌ಎಫ್‌ನ 24, ಸಿವಿಲ್ ಡಿಫೆನ್ಸ್ ಟೀಮ್‌ನ 50 ಮಂದಿ, ಎನ್‌ಡಿಆರ್‌ಎಫ್‌ನ 20 ಮಂದಿ ಮತ್ತು 16 ಬೋಟ್‌ಗಳನ್ನು ಸಜ್ಜಾಗಿಡಲಾಗಿದೆ.