ಕಡಬ : ತನ್ನ ಹೆಂಡತಿಯ ಅಕ್ಕನ ಮಗಳಾದ ಕಾಲೇಜು ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ತುತ್ತಾಗಿದ್ದವ ಎಸ್ಕೇಪ್ ಆಗಲು ಯತ್ನಿಸಿದ್ದ. ಪೊಲೀಸರ ಕೈಗೆ ಸಿಗದೇ ಪರಾರಿಯಾಗುವಾಗ ತನ್ನ ವಾಹನ ಅಪಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಕಡಬದಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮದ ಆಲಾಡಿ ನಿವಾಸಿ ಪುರುಷೋತ್ತಮ್ ಎಂಬಾತನೇ ಅತ್ಯಾಚಾರ ಆರೋಪ ಎದುರಿಸುತ್ತಿರುವ ಆರೋಪಿ. ಇದೀಗ ಕಡಬ ತಾಲೂಕಿನ ಆಲಂಕಾರು ಸಮೀಪದ ಕುಂಡಾಜೆ ಎಂಬಲ್ಲಿ ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಆರೋಪಿ ಪುರುಷೋತ್ತಮ್ ತನ್ನ ಮೇಲೆ ನಿರಂತರವಾಗಿ ಬೆದರಿಕೆ ಹಾಕಿ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ಸಂತ್ರಸ್ತ ವಿದ್ಯಾರ್ಥಿನಿ ದೂರು ನೀಡಿದ್ದಳು. ಇತ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಅತ್ತ ಆರೋಪಿ ಪುರುಷೋತ್ತಮ್ ನಾಪತ್ತೆಯಾಗಿದ್ದ.
ಪೊಲೀಸರ ಕಣ್ಣು ತಪ್ಪಿಸಿ ಬೆಂಗಳೂರು ಕಡೆಗೆ ಕಾರಿನಲ್ಲಿ ಪರಾರಿಯಾಗುವಾಗ ಕಡಬದ ಕುಂಡಾಜೆ ಎಂಬಲ್ಲಿ ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದಲ್ಲಿ ಆರೋಪಿ ಪುರುಷೋತ್ತಮನಿಗೆ ಗಾಯಗಳಾಗಿದ್ದು, ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಸ್ತುತ ಪೊಲೀಸರ ಬೆಂಗಾವಲಿನಲ್ಲಿ ಆರೋಪಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ : ಚಿಕ್ಕಮಗಳೂರು ಬಾಲಕನ ವರಿಸಿದ ಬೆಂಗಳೂರು ಬೆಡಗಿ.. ಕುಟುಂಬಸ್ಥರ ಸಮ್ಮುಖದಲ್ಲೇ ವಿವಾಹ!