ಬಂಟ್ವಾಳ: ವಿದ್ಯುತ್ ಬಿಲ್ ಸಂಬಂಧಿಸಿ ಮೆಸ್ಕಾಂ ಅನುಸರಿಸುತ್ತಿರುವ ನೀತಿಗೆ ಮಾಜಿ ಸಚಿವ ಬಿ.ರಮಾನಾಥ ರೈ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಖಂಡಿಸಿದ್ದಾರೆ.
ಇದನ್ನು ತಕ್ಷಣ ರದ್ದುಗೊಳಿಸಿ, ಕ್ರಮ ಕೈಗೊಳ್ಳಬೇಕು ಎಂದು ಮಾಧ್ಯಮ ಹೇಳಿಕೆಯಲ್ಲಿ ಒತ್ತಾಯಿಸಿರುವ ಅವರು, ಸರಿಪಡಿಸದೇ ಇದ್ದಲ್ಲಿ ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇತ್ತೀಚೆಗೆ ಸುದ್ದಿಗೋಷ್ಟಿಯಲ್ಲಿ ಕೊರೊನಾ ವೈರಸ್ನಿಂದ ತತ್ತರಿಸಿ ಲಾಕ್ಡೌನ್ ಆದೇಶ ಜಾರಿಯಾದ ದಿನದಿಂದ ಸಾರ್ವಜನಿಕರು ತಮ್ಮ 2 ತಿಂಗಳ ಗೃಹ ವಿದ್ಯುತ್ ಬಿಲ್ ಮನ್ನಾ ಮಾಡುವಂತೆ ತಿಳಿಸಿದ್ದರು. ಆದರೆ ಮೆಸ್ಕಾಂ ಇಲಾಖೆಯವರು ಮನೆಗಳ ವಿದ್ಯುತ್ ಬಿಲ್‌ನಲ್ಲಿ 3 ತಿಂಗಳ ಬಿಲ್ಲನ್ನು ಒಟ್ಟಿಗೆ ಸೇರಿಸಿ ಪಾವತಿಸುವಂತೆ ಒತ್ತಾಯಿಸುತ್ತಿರುವುದು ಗೃಹಬಳಕೆದಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ರೈ ಆಕ್ಷೇಪ ವ್ಯಕ್ತಪಡಿಸಿದರು.