ಮಂಗಳೂರು: ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಕಸ್ತೂರಿ ರಂಗನ್ ವರದಿ ಇನ್ನೂ ರದ್ದಾಗಿಲ್ಲ. ರಾಜಕೀಯ ಮಾಡುವುದನ್ನು ನಿಲ್ಲಿಸಿ ಎಂದು ಮಾಜಿ ಸಚಿವ ಬಿ ರಮಾನಾಥ್ ರೈ ಹೇಳಿದರು.
ಗುರುವಾರ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗಾಡ್ಗೀಳ್ ವರದಿ ಕಠಿಣ ಅರಣ್ಯ ಕಾಯ್ದೆ ತರಲು ಹೋದಾಗ, ಜನ ವಿರೋಧ ಮಾಡಿದಾಗ ಕಸ್ತೂರಿ ರಂಗನ್ ಅಧ್ಯಕ್ಷತೆ ಸಮಿತಿ ಮಾಡಿ, ಗಾಡ್ಗೀಳ್‌ನಲ್ಲಿದ್ದ ಸರಿ ತಪ್ಪು ಸರಿಪಡಿಸಲು ಸೂಚಿಸಲಾಗಿತ್ತು. ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಹಲವು ವರ್ಷಗಳಿಂದ ಚರ್ಚೆಗಳು ನಡೆಯುತ್ತಿವೆ. ರಾಜ್ಯ ಸರ್ಕಾರ ವರದಿಗೆ ವಿರೋಧ ವ್ಯಕ್ತಪಡಿಸಿದೆಯೇ ಹೊರತು ರದ್ದುಪಡಿಸಲು ತಿಳಿಸಿಲ್ಲ ಎಂದರು.
ಕಸ್ತೂರಿ ರಂಗನ್ ವರದಿ ಹಲವು ರಾಜ್ಯಗಳಿಗೆ ಸೇರಿದ ವಿಚಾರ. ಎಲ್ಲ ರಾಜ್ಯಗಳಿಗೆ ಕರಡು ನೋಟಿಫಿಕೇಶನ್ ಕೊಡುತ್ತಾರೆ. ರಾಜ್ಯಗಳ ತಕರಾರು ಇದ್ದರೆ ಸೂಚಿಸಿ ಕಳುಹಿಸಿ ಕೊಡಿ ಎಂದು ಸೂಚನೆ ನೀಡುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಈ ಬಗ್ಗೆ ವಿಸ್ತೃತ ಚರ್ಚೆ ಆಗಿದೆ. ಈಗಿರುವ ಅರಣ್ಯ ಕಾಯ್ದೆ ಬಹಳ ಕಠಿಣ ಇದೆ, ಇರುವ ಕಠಿಣತೆ ಸಾಕು ಅಂತ ವಿರೋಧ ವ್ಯಕ್ತಪಡಿಸಿಸಿದ್ದೆವು. ಈ ಬಗ್ಗೆ ನಾಲ್ಕೈದು ಬಾರಿ ಡ್ರಾಫ್ಟ್ ನೋಟಿಫಿಕೇಶನ್ ಬರುತ್ತಲೇ ಇತ್ತು ಎಂದರು.
ಮೊದಲ ಬಾರಿ ಈ ವರದಿ ಬಂದಾಗ ಜನರಲ್ಲಿ ಸರಿಯಾದ ಮಾಹಿತಿ ಇಲ್ಲದೆ ಗುಲ್ಲೆದ್ದಿತು. ಎನ್ಡಿಎ ಬಂದ ಮೇಲೆ ಕೈ ವರದಿ ಸರಿಯಾಗಿ ಕೊಟ್ಟಿಲ್ಲ ಎಂದು ಅಪಪ್ರಚಾರ ಮಾಡಲಾಯಿತು. ಅಂತಿಮವಾಗಿ ಕಸ್ತೂರಿ ರಂಗನ್ ವರದಿಯೇ ಬೇಡ ಎಂದು ಕಳಿಸಿದೆವು. ಈಗಿನ ಸರ್ಕಾರ ಕೂಡ ಬೇಡ ಅಂತ ವರದಿ ಕೊಟ್ಟಿದೆ ಎಂದರು.
ಜಾರಿ ಮಾಡೋದು ಬಿಡೋದು ಕೇಂದ್ರಕ್ಕೆ ಬಿಟ್ಟದ್ದು. ಈ ವರದಿಗೆ ವಿರೋಧ ಎಂದರೆ ಸಾಲದು. ರದ್ದು ಮಾಡುವಲ್ಲಿ ಯಾವ ಕ್ರಮ ಕೈಗೊಂಡಿಲ್ಲ. ಡಬಲ್ ಎಂಜಿನ್ ಸರ್ಕಾರ ಇರುವಾಗ ಕೇಂದ್ರದ ಜತೆ ಮಾತಾಡಿ ಕೇಂದ್ರದ ಅರಣ್ಯ ಪರಿಸರ ಇಲಾಖೆಯಿಂದ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.
ಕಸ್ತೂರಿ ರಂಗನ್ ವರದಿ ರದ್ದಾಗಿಲ್ಲ. ಆ ಸಮಸ್ಯೆ ಇನ್ನೂ ಜೀವಂತ ಇದೆ. ರಾಜ್ಯ ಸರ್ಕಾರ ವಿರೋಧ ಇದೆ ಎಂದ ಮಾತ್ರಕ್ಕೆ ರದ್ದಾಗುವುದಿಲ್ಲ. ನಮ್ಮ ಸರ್ಕಾರದ ಮೇಲೆ ಗೂಬೆ ಕೂರಿಸಿದಿರಿ. ರದ್ದು ಮಾಡಲು ಆಗದಿದ್ದರೆ ಕಸ್ತೂರಿ ರಂಗನ್ ಹೆಸರು ಹೇಳಿ ರಾಜಕೀಯ ಮಾಡೋದನ್ನ ನಿಲ್ಲಿಸಿ. ಎತ್ತಿನಹೊಳೆ ಬೇಡ ಎಂದವರು ಈಗ ನಾವೇ ಅದನ್ನು ಮಾಡಿದ್ದು ಎನ್ನುತ್ತಿದ್ದಾರೆ. ಅದೇ ರೀತಿ ಇದು ಕೂಡ ಆಗಿದೆ. ರದ್ದು ಮಾಡದೆ ಕೇವಲ ವಿರೋಧ ಇದೆ ಎನ್ನುವುದು ರಾಜಕೀಯ ಎಂದು ರಮಾನಾಥ್ ರೈ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಸಿ ಪಿ ಯೋಗೇಶ್ವರ್ ವಾಗ್ದಾಳಿ