ಮಂಗಳೂರು: ರಾಜ್ಯ ಸರಕಾರ 2019-20ನೇ ಸಾಲಿನಲ್ಲಿ ನೀಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪುತ್ತೂರಿನ ಹಿರಿಯ ಯಕ್ಷಗಾನ ಕಲಾವಿದ ಡಾ. ಶ್ರೀಧರ್ ಭಂಡಾರಿ ಆಯ್ಕೆಯಾಗಿದ್ದಾರೆ.
ಪುತ್ತೂರು ನಿವಾಸಿಯಾಗಿರುವ ಇವರು 1945ರ ಅ.1ರಂದು ಜನಿಸಿದರು. ಯಕ್ಷಗಾನ ಕಲಾವಿದ ಸೀನಪ್ಪ ಭಂಡಾರಿ ಹಾಗೂ ಸುಂದರಿ ದಂಪತಿಯ ಪುತ್ರ. ತನ್ನ 11ನೇ ವಯಸ್ಸಿನಲ್ಲಿ ತಂದೆ ಸೀನಪ್ಪ ಭಂಡಾರಿ ಅವರಿಂದ ಯಕ್ಷಗಾನ ತರಬೇತಿ ಪಡೆದು 1963ರಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಮೇಳದಲ್ಲಿ ತನ್ನ ಮೊದಲ ಕಲಾಸೇವೆ ಆರಂಭಿಸಿ ಸುಮಾರು 18ವರ್ಷ ಕಾಲ ಈ ಮೇಳದಲ್ಲಿ ಸೇವೆ ಸಲ್ಲಿಸಿದ್ದರು.
1981ರಿಂದ 88ರವರೆಗೆ ತನ್ನ ಸ್ವಂತ ಮೇಳವಾದ ಪುತ್ತೂರು ಮಹಾಲಿಂಗೇಶ್ವರ ಮೇಳವನ್ನು ಮುನ್ನಡೆಸಿದ್ದಾರೆ. 1988ರಲ್ಲಿ ಕಾಂತಾವರ ಮೇಳ ಕಟ್ಟಿ 11ವರ್ಷ ನಿರಂತರ ತಿರುಗಾಟ ನಡೆಸಿದ್ದಾರೆ. 1991ರಲ್ಲಿ ಮತ್ತೆ ತಮ್ಮ ಮೂಲ ಮೇಳವಾದ ಶ್ರೀಕ್ಷೇತ್ರ ಧರ್ಮಸ್ಥಳ ಮೇಳಕ್ಕೆ ಆಗಮಿಸಿ, ಇಲ್ಲಿಯ ವರೆಗೆ ಅಭಿಮನ್ಯು, ಬಬ್ರುವಾಹನ, ಕೃಷ್ಣ, ಪರಶುರಾಮ ಪಾತ್ರದಲ್ಲಿ ಧರ್ಮಸ್ಥಳ ಮೇಳದಲ್ಲೇ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಕಲಾಸೇವೆ ಪರಿಗಣಿಸಿ ಅಮೇರಿಕಾದ ಬೋಸ್ಟರ್ನ್ ವಿವಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.